ಬೆಳಗಾವಿ : ನಗರದ ಲಕ್ಷ್ಮೀಟೆಕ್ ನಕ್ಷತ್ರ ಕಾಲೋನಿಯಲ್ಲಿನ ನಿವೃತ್ತ ಏರ್‌ಫೋರ್ಸ್ ಆಫೀಸರ್ ಒಬ್ಬರ ಮನೆಯಲ್ಲಿ ಕಳೆದ 10 ತಿಂಗಳ ಹಿಂದೆ ಕಳ್ಳತನ ಮಾಡಿದ್ದ ಆರೋಪಿಗಳನ್ನು ಇಲ್ಲಿನ ಕ್ಯಾಂಪ್ ಪೊಲೀಸರು ಬಂಧಿಸಿದ್ಧಾರೆ.
ನಿವೃತ್ತ ಏರ್‌ಫೋರ್ಸ್ ಆಫೀಸರ್ ಆಸ್ಟನ್‌ಜಾನ್ ಎಂಬುವರ ಮನೆಯಲ್ಲಿ ಕಳೆದ 10 ತಿಂಗಳ ಹಿಂದೆ 530 ಗ್ರಾಂ ಚಿನ್ನಾಭರಣ, ಮಾರುತಿ ಬಲೋನೋ ಕಾರು ಕಳ್ಳತನವಾಗಿತ್ತು. ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಸಿಪಿಐ ಸಂತೋಷ್ಕುಮಾರ್ ನೇತೃತ್ವದ ತಂಡಕ್ಕೆ ಆರೋಪಿಗಳು ಕೊಲ್ಲಾಪುರದಲ್ಲಿದ್ದಾರೆಂದು ಮಾಹಿತಿ ಲಭ್ಯವಾಗಿತ್ತು. ಮಹಾರಾಷ್ಟ್ರ ಪೊಲೀಸರೊಂದಿಗೆ ನಿರಂತರ ಸಂಪರ್ಕ ಸಾಧಿಸಿದ ಪೊಲೀಸರ ತಂಡ ಕೊಲ್ಲಾಪುರದ ಇಬ್ಬರು ಆರೋಪಿಗಳನ್ನು ಬಂಧಿಸಿ ವಶಕ್ಕೆ ಪಡೆದು ಆಸ್ಟನ್ಜಾನ್ರ ಕಳುವಾಗಿದ್ದ ಚಿನ್ನಾಭರಣ ಹಾಗೂ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಹೈಟೆಕ್ ಕಳ್ಳರು:
ಮಹಾರಾಷ್ಟ್ರ ಮೂಲದ ಪ್ರಶಾಂತ್ ಕಾಶಿನಾಥ ಕರೋಶಿ (35), ಅವಿನಾಶ್ ಶಿವಾಜಿ ಅಡಾವಕರ್ (28) ಬಂಧಿತ ಆರೋಪಿಗಳು. ಬಂಧಿತರ ಪೈಕಿ ಪ್ರಶಾಂತ್ ಕರೋಶಿ ಎಂಬಾತ ಬಿ.ಕಾಂ ಪದವೀಧರ, ಕೊಲ್ಲಾಪುರದ ಖಾಸಗಿ ಬ್ಯಾಂಕ್ವೊಂದರಲ್ಲಿ ಉದ್ಯೋಗಿಯಾಗಿದ್ದ ಕುಟುಂಬ ನಿರ್ವಹಣೆ ಮಾದಡೇ ಐಷಾರಾಮಿ ಜೀವನಕ್ಕೆ ಮನಸೋತಿದ್ದ. ಈತನಿಗೆ ಬ್ಯಾಂಕ್‌ನಲ್ಲಿ ನೀಡುವ ಸಂಬಳ ಸಾಲದೇ ಕಳ್ಳತನಕ್ಕಿಳಿಯಲು ಪಕ್ಕಾ ಪ್ಲಾನ್ ಮಾಡಿಕೊಂಡಿದ್ದ. ಯೂಟ್ಯೂಬ್‌ನಲ್ಲಿ ಮನೆ ಬಾಗಿಲುಗಳ ಲಾಕ್, ತಿಜೋರಿ ಸೇರಿ ಇತರ ಲಾಕ್‌ಗಳನ್ನು ಹೇಗೆ ಒಡೆಯೋದು ಎಂಬುದನ್ನು ತಿಳಿದುಕೊಂಡಿದ್ದ.
ತನ್ನ ಸ್ನೇಹಿತ ಅವಿನಾಶ್ ಜತೆ ನಗರ ಪ್ರದೇಶಗಳಿಗೆ ಬಸ್‌ನಲ್ಲಿ ತೆರಳಿ ಬಳಿಕ ಗೂಗಲ್ ಮ್ಯಾಪ್ ಸಹಾಯದಿಂದ ನಗರದ ಹೊರವಲಯದಲ್ಲಿ ಎಲ್ಲೆಲ್ಲಿ ಮನೆಗಳಿವೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದ. ಬಳಿಕ ತಾವೇ ಹಗಲೊತ್ತಿನಲ್ಲಿ ಆ ಪ್ರದೇಶಗಳಿಗೆ ಹೋಗಿ ಬೀಗ ಹಾಕಿದ ಮನೆಗಳನ್ನು ಪತ್ತೆ ಹಚ್ಚಿ ರಾತ್ರಿ ವೇಳೆ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು. ಕಳೆದ ಹಲವು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ ಈ ಹೈಟೆಕ್ ಕಳ್ಳರು 2018ರಿಂದೀಚೆಗೆ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧೆಡೆ ನಾಲ್ಕು ಮನೆಗಳಲ್ಲಿ ಕಳ್ಳತನ ಮಾಡಿದ್ದರು. ಆರೋಪಿಗಳನ್ನು ಬಂಧಿಸಿ ತಮ್ಮದೇ ಭಾಷೆಯಲ್ಲೇ ಪೊಲೀಸರು ವಿಚಾರಿಸಿದಾಗ ಈ ಬಗ್ಗೆ ಕಳ್ಳರು ಮಾಹಿತಿ ನೀಡಿದ್ದಾರೆ.
ಬಂಧಿತರಿಂದ 28ಲಕ್ಷ ರೂ. ಮೌಲ್ಯದ ಚಿನ್ನಾಭರಣ, 12ಲಕ್ಷ ರೂ. ಮೌಲ್ಯದ ಮಾರುತಿ ಬಲೋನೋ ಕಾರು ಜಪ್ತಿ ಮಾಡಿದ್ದಾರೆ. ಪುಣೆ, ಮುಂಬೈನಲ್ಲೂ ಇದೇ ಮಾದರಿಯಲ್ಲಿ ಕಳ್ಳತನ ಮಾಡಿದ್ದಾರೆ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಒಂದೆಡೆ ಪ್ರಧಾನಿ ಮೋದಿ ಡಿಜಿಟಲ್ ಇಂಡಿಯಾ ಬಗ್ಗೆ ಕನಸು ಕಾಣುತ್ತಿದ್ದರೆ ಐನಾತಿ ಕಳ್ಳರು ಡಿಜಿಟಲ್ ತಂತ್ರಜ್ಞಾನ ಉಪಯೋಗಿಸಿ ಈ ರೀತಿ ಕಳ್ಳತನಕ್ಕೆ ಇಳಿದಿರುವುದು ದುರಂತವೇ ಸರಿ. ಇನ್ನು ಪ್ರಕರಣ ಬೇಧಿಸಿದ ಬೆಳಗಾವಿಯ ಕ್ಯಾಂಪ್ ಪೊಲೀಸರಿಗೆ ಸಾರ್ವಜನಿಕರು ಧನ್ಯವಾದ ತಿಳಿಸಿದ್ದಾರೆ.