ಬೆಳಗಾವಿ: ದೇಶದಲ್ಲಿ ಪ್ರಥಮ ಬಾರಿಗೆ ಮಹಿಳಾ ಸೈನಿಕರ ನೇಮಕಾತಿ ರ್ಯಾಲಿ ಬೆಳಗಾವಿಯಲ್ಲಿ ಜುಲೈ 22ರಿಂದ 27ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ಧಾರೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶದಾದ್ಯಂತ ಒಟ್ಟು ಐದು ಕಡೆಗಳಲ್ಲಿ ಮಹಿಳಾ ಸೇನಾ ನೇಮಕಾತಿ ರ‍್ಯಾಲಿ ನಡೆಸಲಾಗುತ್ತಿದ್ದು, ಅದರಲ್ಲಿ ಬೆಳಗಾವಿಯೂ ಒಂದು. ಬೆಳಗಾವಿಯ ಮರಾಠ ಲಘು ಪದಾತಿ ದಳ ಕೇಂದ್ರದ ಆವರಣದಲ್ಲಿರುವ ಶಿವಾಜಿ ಕ್ರೀಡಾಂಗಣದಲ್ಲಿ ಜುಲೈ 22ರಿಂದ 27ರವರೆಗೆ ನೇಮಕಾತಿ ರ್ಯಾಲಿ ನಡೆಯಲಿದೆ. ಅಭ್ಯರ್ಥಿಗಳು ಸಲ್ಲಿಸುವ ಜಾತಿ ಪ್ರಮಾಣಪತ್ರಗಳು ಹಾಗೂ ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ತಾತ್ಕಾಲಿಕವಾಗಿ ಪರಿಶೀಲನೆ ನಡೆಸಿ, ನೇಮಕಾತಿ ಪ್ರಾಧಿಕಾರದ ಜತೆ ಸಮನ್ವಯ ಸಾಧಿಸಲು ಕಂದಾಯ ಮತ್ತು ಶೈಕ್ಷಣಿಕ ಇಲಾಖೆಯ ಸಿಬ್ಬಂದಿಯನ್ನು ಕೂಡ ನಿಯೋಜಿಸುವಂತೆ ಜಿಲ್ಲಾಧಿಕಾರಿ ಈ ವೇಳೆ ತಿಳಿಸಿದರು.
ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲಿರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಬಸ್ ಹಾಗೂ ರೈಲು ನಿಲ್ದಾಣದಲ್ಲಿ ಸಹಾಯ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತದೆ. ಸೂಕ್ತ ಸಾರಿಗೆ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ ಹಾಗೂ ವಿದ್ಯುತ್ ಸಂಪರ್ಕವನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ವಿ.ಮುನ್ಯಾಳ, ಎರಡು ಆಂಬ್ಯುಲೆನ್ಸ್, ವೈದ್ಯರು, ವೈದ್ಯಕೀಯ ಸಿಬ್ಬಂದಿ, ತಪಾಸಣಾ ಯಂತ್ರೋಪಕರಣಗಳು ಹಾಗೂ ಅಗತ್ಯ ಔಷಧಿಗಳನ್ನು ಆರೋಗ್ಯ ಇಲಾಖೆಯ ವತಿಯಿಂದ ಒದಗಿಸಲಾಗುವುದು ಎಂದು ವಿವರಿಸಿದರು.
ರ‍್ಯಾಲಿಯ ವೇಳೆ ನೂಕುನುಗ್ಗಲು ಉಂಟಾಗದಂತೆ ನಿಯಂತ್ರಿಸಲು ಸ್ಥಳೀಯ ಪೊಲೀಸ್ ಸಿಬ್ಬಂದಿ ನಿಯೋಜನೆ, ಅಭ್ಯರ್ಥಿಗಳಿಗೆ ಪಾವತಿ ಆಧಾರದ ಮೇಲೆ ಉಪಹಾರ ಒದಗಿಸುವುದು ಸೇರಿದಂತೆ ಒಟ್ಟಾರೆ ನೇಮಕಾತಿ ಪ್ರಕ್ರಿಯೆ ಸುಸೂತ್ರವಾಗಿ ನಡೆಸಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಡಾ. ಬೊಮ್ಮನಹಳ್ಳಿ ತಿಳಿಸಿದರು.
ದೇಶದಲ್ಲಿ ಪ್ರಥಮ ಬಾರಿ ಮಹಿಳಾ ಸೈನಿಕರ ಭರ್ತಿ ರ್ಯಾಲಿಯಲ್ಲಿ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯದ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ರ‍್ಯಾಲಿಯಲ್ಲಿ ಒಟ್ಟಾರೆ ನಾಲ್ಕು ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸೇನಾ ನೇಮಕಾತಿ ಅಧಿಕಾರಿ ಕರ್ನಲ್ ಪ್ರಣೀತ್ ದಯಾಳ್ ತಿಳಿಸಿದರು.