ಬೆಳಗಾವಿ: ರಾಜ್ಯವನ್ನು ಕಟ್ಟಿದ ರಾಜ, ಮಹಾರಾಜರು, ವೀರ ಯೋಧರು, ಮಹಾಪುರುಷರ ಇತಿಹಾಸವನ್ನು ಕೇಂದ್ರ ಮತ್ತು ರಾಜ್ಯದ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳಿಸಿಬೇಕು ಎಂದು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಕರ್ನಾಟಕ ನವ ನಿರ್ಮಾಣ ಸೇನೆಯ ಮುಖಂಡರು, ಕರ್ನಾಟಕದ ಕಲೆ, ಸಾಹಿತ್ಯ, ವಾಸ್ತುಶಿಲ್ಪ, ಕಲೆಗಾರರು, ಸಾಹಿತಿಗಳು, ಚಿಂತಕರ ಹಾಗೂ ನಾಡು ಕಟ್ಟಿದ ಧೀರರು, ಶೂರರ ಇತಿಹಾಸವೇ ಇಲ್ಲದಿರುವುದರಿಂದ ಈಗಿನ ಮಕ್ಕಳಿಗೆ ಮಾಹಿತಿ ಸಿಗುವುದಿಲ್ಲ. ಹೀಗಾಗಿ ಕರ್ನಾಟಕದ ಪಠ್ಯ ಪುಸ್ತಕಗಳಲ್ಲಿ ರಾಜ್ಯವನ್ನು ಆಳಿದ ರಾಜ ಮನೆತನಗಳು, ರಾಜರು, ಇತಿಹಾಸ ಪುರುಷರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಏಕೀಕರಣದ ಹೋರಟಾದಲ್ಲಿ ಭಾಗಿಯಾದ ಮಹನೀಯರನ್ನು ಪರಿಚಯಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ ಎಂದರು.
ಇನ್ನು ರಾಜ್ಯದ ಮಕ್ಕಳಿಗೆ ಕರ್ನಾಟಕ ರಾಜ್ಯದ ಉದಯದ ಬಗ್ಗೆ ಗೊತ್ತಿಲ್ಲ. ಅದನ್ನು ಪರಿಚಯಿಸುವ ಕೆಲಸ ಮೊದಲು ಆಗಬೇಕು. ಅಧಿಕಾರಕ್ಕೆ ಬರುವ ಸರ್ಕಾರಗಳು ತಮಗೆ ಬೇಕಾದ ಹಾಗೆ ಪಠ್ಯಪುಸ್ತಕಗಳನ್ನು ಬದಲಾವಣೆ ಮಾಡಿಕೊಂಡು ತಮ್ಮ ಪಕ್ಷದ ಸಿದ್ಧಾಂತ ಒಪ್ಪುವ ವ್ಯಕ್ತಿಗಳ ಹೆಸರನ್ನು ಪಠ್ಯದಲ್ಲಿ ಸೇರಿಸುವ ವ್ಯವಸ್ಥಿತ ಹುನ್ನಾರ ಮಾಡಲಾಗುತ್ತಿದೆ. ಈ ಕೂಡಲೇ ಇಂಥದನ್ನು ನಿಲ್ಲಿಸುವ ಮೂಲಕ ನಿಜವಾದ ಮಹನೀಯರನ್ನು ಪರಿಚಯಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ನವ ನಿರ್ಮಾಣ ಸೇನೆಯ ಅಧ್ಯಕ್ಷ ಬಾಬು ಸಂಗೋಡಿ, ಸಂತೋಷ ಗುಬ್ಬಚ್ಚಿ, ಮಂಜುನಾಥ ಹಡಪದ, ಶ್ರೀಕಾಂತ ಹಂಪನ್ನವರ, ಬಸವರಾಜ ದೊಡ್ಡಮನಿ, ಮಹಾಂತೇಶ ಅನಗೋಳಕರ ಮತ್ತಿತರರು ಇದ್ದರು.