ಬೆಳಗಾವಿ : ಗುರು ಕೇವಲ ಅಕ್ಷರ ಕಲಿಸಲಾರ, ಆತ ಪ್ರತಿಯೊಬ್ಬರ ಬಾಳಿಗೆ ಬೆಳಕಾಗಿ ನಿಲ್ಲುತ್ತಾನೆ. ಹಾಗಾಗಿ ನಮ್ಮ ದೇಶದಲ್ಲಿ ಗುರುವನ್ನು ಬೃಹ್ಮ, ವಿಷ್ಣು, ಮಹೇಶ್ವರನಿಗೆ ಹೋಲಿಕೆ ಮಾಡುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅಭಿಪ್ರಾಯಪಟ್ಟರು.
ನಗರದ ಗಾಂಧಿಭವನದಲ್ಲಿ ಜಿ.ಪಂ. ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿರುವ ಸಂಸ್ಕೃತಿ ಜಗತ್ತಿನಲ್ಲಿ ಮತ್ತೆಲ್ಲಿಯೂ ಕಾಣ ಸಿಗುವುದಿಲ್ಲ. ನಮ್ಮಲ್ಲಿ ತಂದೆ- ತಾಯಿಯ ನಂತರದ ಸ್ಥಾನ ಗುರುಗಳಿಗೆ ನೀಡಲಾಗುತ್ತದೆ. ಪರಿಶ್ರಮದಿಂದ ಮಕ್ಕಳ ಅಂಧಕಾರ ಹೋಗಲಾಡಿಸಿದ ಶಿಕ್ಷಕ ಮಹಾನ್ ಸಾಧಕನಾಗಬಲ್ಲ ಎಂದರು.
ನಾವೆಲ್ಲ ಭಾರತದ ಭೂಮಿಯಲ್ಲಿ ಹುಟ್ಟಿದ್ದು ಸಾರ್ಥಕವಾಗಿದೆ. ಪ್ರಮುಖ ಹುದ್ದೆಗಳ ಮೂಲಕ ಸೇವೆ ಸಲ್ಲಿಸಿದ ರಾಧಾಕೃಷ್ಣನ್ ಅವರು ಶಿಕ್ಷಕರಾಗಿದ್ದರು. ಅವರ ತತ್ವ ಸಿದ್ಧಾಂತಗಳನ್ನು ನಾವು ಅಳವಡಿಸಿಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರದ ಸಾಧನೆ ಕೀರ್ತಿ ಶಿಕ್ಷಕರಿಗೆ ದೊರೆಯುತ್ತದೆ. ಒಬ್ಬ ಶಿಕ್ಷಕನಿಗೆ ಒಳ್ಳೆಯ ಹಾಗೂ ಕೆಟ್ಟ ರೀತಿ ಮಕ್ಕಳ ಜೀವನ ನಿರ್ಮಾಣ ಮಾಡಬಹುದಾದ ಶಕ್ತಿ ಇದೆ ಎಂದರು.