ಬೆಳಗಾವಿ: ವಿದ್ಯಾಗಮ ಪಾಠ ಮಾಡಲು ತೆರಳುತ್ತಿದ್ದ ಶಿಕ್ಷಕ ಕೊರೊನಾದಿಂದ ಮೃತಪಟ್ಟಿದ್ದು, ಶಿಕ್ಷಕನ ಕುಟುಂಬದವರು ಇದೀಗ ನಿತ್ಯ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಬೈಲಹೊಂಗಲ ತಾಲೂಕಿನ ಲಕ್ಕುಂಡಿ ಗ್ರಾಮದ ನಿವಾಸಿಯಾಗಿದ್ದ ಶಿಕ್ಷಕ ವೀರನಗೌಡ ಪಾಟೀಲ್ ಆಗಸ್ಟ್ 30ರಂದು ಕೊರೊನಾದಿಂದ ಮೃತಪಟ್ಟಿದ್ದರು. ವೀರನಗೌಡ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ನಾಗನೂರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆಗಸ್ಟ್ 25ರವರೆಗೂ ವಿದ್ಯಾಗಮ ಯೋಜನೆಯಡಿ ಮಕ್ಕಳಿಗೆ ಪಾಠ ಮಾಡಿದ್ದರು. ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪಾಠ ಮಾಡಿದ್ದ ಶಿಕ್ಷಕ ವೀರನಗೌಡ ಪಾಟೀಲ್‌ಗೆ ಆಗಸ್ಟ್ 26ರಂದು ಅನಾರೋಗ್ಯ ಕಾಡಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಿದಾಗ ಕೊರೊನಾ ಇರೋದು ದೃಢಪಟ್ಟಿತ್ತು. ಬಳಿಕ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದರು.
ಅವರಿಗೆ ವಯಸ್ಸಾಗಿತ್ತು. ಬಿಪಿ, ಶುಗರ್ ಸಮಸ್ಯೆಯೂ ಇತ್ತು. ಕೆಲಸಕ್ಕೆ ಹೋಗಬೇಡಿ ಅಂದರೂ ಕೇಳಲಿಲ್ಲ. ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕೆಂದು ಹೋದರು. 50 ವರ್ಷ ಮೇಲ್ಪಟ್ಟವರನ್ನು ವಿದ್ಯಾಗಮದಡಿ ಕರ್ತವ್ಯಕ್ಕೆ ನಿಯೋಜಿಸಿದ್ದೇಕೆ ಎಂದು ರಾಜ್ಯ ಸರ್ಕಾರದ ನಡೆಗೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾಗಮದಡಿ ಕೆಲಸಕ್ಕೆ ಹೋಗದಿದ್ರೆ ನನ್ನ ಪತಿ ಉಳಿಯುತ್ತಿದ್ದರು. ನನ್ನ ಪತಿಯ ಅಂತಿಮ ದರ್ಶನ ಭಾಗ್ಯವೂ ನನಗೆ ಸಿಗಲಿಲ್ಲ. ಸಾಲ ಮಾಡಿ ಮಗಳ ಮದುವೆ ಮಾಡಿದ್ದೇವೆ. ಮಗನಿಗೆ ಕೆಲಸ ಇಲ್ಲ. ಕುಟುಂಬ ನಿರ್ವಹಣೆ ಹೇಗೆ ಮಾಡುವುದು ಅಂತಾ ಸರ್ಕಾರವೇ ಹೇಳಬೇಕು. ಕೋಟಿ ರೂಪಾಯಿ ಕೊಟ್ಟರೂ ನನ್ನ ಗಂಡ ಮರಳಿ ಬರಲ್ಲ. ಮಗನಿಗೆ ಸರ್ಕಾರಿ ನೌಕರಿ ನೀಡಿ, ಇಲ್ಲ ಸೂಕ್ತ ಪರಿಹಾರ ನೀಡುವಂತೆ ಪತ್ನಿ ಸುಶೀಲಾ ಪಾಟೀಲ್ ಆಗ್ರಹಿಸಿದ್ದಾರೆ.