ಬೆಳಗಾವಿ: ದೇಶದಲ್ಲಿಯೇ ಅತಿಹೆಚ್ಚು ತೆರಿಗೆ ಪಾವತಿಸುವ ಎರಡನೇ ರಾಜ್ಯ ಕರ್ನಾಟಕವಾಗಿರುವುದು ಇಲ್ಲಿನ ಉದ್ಯೋಗಶೀಲತೆಗೆ ಸಾಕ್ಷಿಯಾಗಿದೆ. ಉತ್ತರದ ಬೆಳಗಾವಿಯಿಂದ ದಕ್ಷಿಣದ ಬೆಂಗಳೂರುವರೆಗೆ ನಾಡು ವೈವಿಧ್ಯಮಯ ಐತಿಹಾಸಿಕ, ನೈಸರ್ಗಿಕ ತಾಣಗಳನ್ನು ಹೊಂದಿದೆ. ಮುಂಬರುವ 25 ವರ್ಷಗಳ ಅವಧಿಯಲ್ಲಿ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಸ್ಪಷ್ಟ ದಿಕ್ಸೂಚಿಯನ್ನು ರಾಜ್ಯ ಹಾಕಿಕೊಂಡು ಮಹಾನ್ ಕರ್ನಾಟಕ, ಮಹಾನ್ ಭಾರತ ನಿರ್ಮಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.
ಸುವರ್ಣಸೌಧದ ಮುಂಭಾಗದಲ್ಲಿ ಕರ್ನಾಟಕ ವಿಧಾನ ಮಂಡಲವು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳಾದ ಸಂದರ್ಭದಲ್ಲಿ ಆಯೋಜಿಸಿದ್ದ ಸುವರ್ಣ ಸಂಭ್ರಮಾಚರಣೆ ಹಾಗೂ ಕರ್ನಾಟಕ ವಿಧಾನ ಮಂಡಲದ ಮಾಜಿ ಸಭಾಪತಿಯವರು ಹಾಗೂ ಸಭಾಧ್ಯಕ್ಷರುಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ 50 ವರ್ಷಗಳ ಅವಧಿಯಲ್ಲಿ ರಾಜ್ಯವು ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿಯ ದಾಪುಗಾಲು ಹಾಕುತ್ತಿದೆ. ಪ್ರಾಚೀನ ಹಾಗೂ ಮಧ್ಯಕಾಲೀನ ಇತಿಹಾಸದ ಪುಟಗಳನ್ನು ತಿರುವಿದಾಗ ಈ ನಾಡು ಭವ್ಯ ಪರಂಪರೆ, ಭೌಗೋಳಿಕ ವ್ಯಾಪ್ತಿ ಹೊಂದಿತ್ತು ಎಂದು ತಿಳಿಯುತ್ತದೆ. ಸಂಗೀತ, ಕಲೆ, ಸಾಂಸ್ಕೃತಿಕ ಕ್ಷೇತ್ರಕ್ಕೆ ನಾಡಿನ ಕೊಡುಗೆ ದೊಡ್ಡದು. ಶಿಕ್ಷಣ, ಔದ್ಯೋಗೀಕರಣದಲ್ಲಿಯೂ ರಾಜ್ಯ ಪ್ರಗತಿ ಸಾಧಿಸಿದೆ. ಕನ್ನಡ ಎಂಟು ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ವರ್ಷವೀಡಿ ಅರ್ಥಪೂರ್ಣ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯ ನಂತರ ಇಂದು ಇರುವ ವಿಶಾಲ ಕರ್ನಾಟಕ ಒಂದಾಗಿರಲಿಲ್ಲ. ವಿವಿಧ ಆಡಳಿತ ಪ್ರಾಂತ್ಯಗಳಲ್ಲಿ ಕನ್ನಡ ಭಾಷಿಕರು ಹರಿದು ಹಂಚಿ ಹೋಗಿದ್ದರು. ಅನೇಕ ಮಹನೀಯರ ತ್ಯಾಗ, ಬಲಿದಾನಗಳಿಂದ ಅಖಂಡ ಕರ್ನಾಟಕ ನಿರ್ಮಾಣ ಸಾಧ್ಯವಾಯಿತು.
ಆ ಹೋರಾಟಗಾರರನ್ನೆಲ್ಲ ಸ್ಮರಿಸಬೇಕು. 1956ರಲ್ಲಿ ಒಂದುಗೂಡಿದರೂ ಕೂಡ ರಾಜ್ಯಕ್ಕೆ ಮೈಸೂರು ರಾಜ್ಯ ಎಂದೇ ಕರೆಯಲಾಗುತ್ತಿತ್ತು. 1973ರಲ್ಲಿ ಡಿ.ದೇವರಾಜ ಅರಸು ಅವರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ್ದು ಐತಿಹಾಸಿಕ ಕಾರ್ಯವಾಗಿದೆ. ಭಾಷೆಯ ಅಭಿಮಾನ ಇರಬೇಕು, ದುರಭಿಮಾನಿಗಳಾಗಬಾರದು. ಯಾವುದೇ ಭಾಷೆ ಕಲಿಯಬಹುದು, ನಮ್ಮ ಮಾತೃ ಭಾಷೆ ಮರೆಯಬಾರದು. ಸುವರ್ಣ ಸಂಭ್ರಮಾಚರಣೆ ಈ ಸಂದರ್ಭದಲ್ಲಿ ನಾವು ಕನ್ನಡಿಗರ ಜೊತೆ ಕನ್ನಡದಲ್ಲಿಯೇ ಮಾತನಾಡುವ ನಿರ್ಣಯ ಪಾಲಿಸಬೇಕು. ನಮ್ಮ ನೆಲ, ಜಲ, ಕಲೆ, ಸಂಸ್ಕೃತಿ, ಪರಂಪರೆಗಳ ಅರಿವು ಹೊಂದಬೇಕು ಎಂದರು.
ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಮಾತನಾಡಿ, ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡ ನಂತರ ಆಗಿರುವ ಸರ್ವಾಂಗೀಣ ವಿಕಾಸಕ್ಕೆ ಕೊಡುಗೆ ನೀಡಿರುವ ಹಿರಿಯರನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಮುಂದಿನ ಪೀಳಿಗೆಗೆ ಒಂದು ಮಾದರಿಯಾದ ರಾಜ್ಯ ಮತ್ತು ಪರಂಪರೆಯನ್ನು ನೀಡುವ ಕೆಲಸ ಕಾರ್ಯಗಳನ್ನು ನಾವು ಮಾಡಬೇಕು. ಪ್ರೀತಿ ಪೂರ್ವಕ ದ್ವೇಷ ರಹಿತ ರಾಜ್ಯ ನಮ್ಮದು. ಆ ಹಿರಿಮೆ ಗರಿಮೆ ಎತ್ತಿ ಹಿಡಿಯಬೇಕು ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಹಿಂದಿನ ಹಿರಿಯರು ಸವೆಸಿದ ಹಾದಿ ಹಾಗೂ ಮಾರ್ಗದರ್ಶನ ಸದಾ ಕಾಲ ನಮಗೆ ಬೇಕು. ಸರ್ಕಾರ ಹಾಗೂ ವಿಧಾನಮಂಡಲದ ಸಮನ್ವಯ, ಸಹಕಾರದಿಂದ ಈ ಅರ್ಥಪೂರ್ಣ ಕಾರ್ಯಕ್ರಮ ಸಾಧ್ಯವಾಗಿದೆ ಎಂದು ಹೇಳಿದರು.
ಸಚಿವ ಹೆಚ್.ಕೆ.ಪಾಟೀಲ ಮಾತನಾಡಿ, 1973 ರ ನವೆಂಬರ್ 1 ರಂದು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾಯಿತು. ಕಳೆದ 50 ವರ್ಷಗಳ ಅವಧಿಯಲ್ಲಿ ನಾಡಿನಲ್ಲಿ ಮಹತ್ವದ ಬದಲಾವಣೆಗಳು, ಅಭಿವೃದ್ಧಿಯಾಗಿವೆ. ಗಂಡು ಮೆಟ್ಟಿನ ನಾಡು ಬೆಳಗಾವಿಯ ಸುವರ್ಣ ಸೌಧದ ಎದುರಿನಲ್ಲಿ ಈ ಮಹತ್ವದ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಭಾಪತಿ ಬಿ.ಎಲ್. ಶಂಕರ್, ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದರು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯ ವಿಧಾನಪರಿಷತ್ ಮಾಜಿ ಸಭಾಪತಿಗಳಾದ ಡಿ.ಹೆಚ್.ಶಂಕರಮೂರ್ತಿ, ವೀರಣ್ಣ ಮತ್ತಿಕಟ್ಟಿ, ಪ್ರೊ. ಬಿ.ಕೆ.ಚಂದ್ರಶೇಖರ, ವಿ.ಆರ್.ಸುದರ್ಶನ, ಬಿ.ಎಲ್.ಶಂಕರ್, ವಿಧಾನಸಭೆಯ ಮಾಜಿ ಸಭಾಧ್ಯಕ್ಷರುಗಳಾದ ಜಗದೀಶ್ ಶೆಟ್ಟರ್, ಕೆ.ಜೆ. ಬೋಪಯ್ಯ, ಕೆ.ಬಿ. ಕೋಳಿವಾಡ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಆಕರ್ಷಕ ಕಿನ್ನಾಳ ಚೌಕಿ ಕಲೆಯ ಸ್ಮರಣಿಕೆ, ಮೈಸೂರು ಪೇಟ, ಶಾಲು, ಹಾರ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.
ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಡಾ. ಜಿ. ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ, ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೇರಿ ಮತ್ತಿತರ ಗಣ್ಯರು ವೇದಿಕೆಯಲ್ಲಿ ಇದ್ದರು. ನಂತರ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಇದನ್ನೂ ಓದಿ: ರಾಜ್ಯಾದ್ಯಂತ ಲೋಕ್ ಅದಾಲತ್ ಮೂಲಕ 25 ಲಕ್ಷ ಪ್ರಕರಣಗಳು ಇತ್ಯರ್ಥ!