ಬೆಳಗಾವಿ : ಒಳ್ಳೆಯ ಆಡಳಿತ ಮಾಡದಿರೋರು ಆಗಾಗ ವಿಷಯಗಳನ್ನು ಬೇರೆಡೆಗೆ ತಿರುಗಿಸುವ ಕೆಲಸ ಮಾಡುತ್ತಾರೆ. ಮಹಾರಾಷ್ಟ್ರ ಸರ್ಕಾರದ ನಾಯಕರು ಪ್ರಬುದ್ಧರಾಗಬೇಕು ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸಿಎಂ ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ.
ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದ ಮರಾಠಿ ಮತ್ತು ಕನ್ನಡ ಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಅವಕಾಶ ಸಿಕ್ಕಾಗ ಗಡಿಭಾಗದ ಶಾಲೆಗಳಿಗ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಈಗಾಗಲೇ ಗಡಿಭಾಗ ಆಂಧ್ರ, ತಮಿಳುನಾಡು ಹಾಗೂ ಇವತ್ತು ಮಹಾರಾಷ್ಟ್ರ ಗಡಿ ಭಾಗದ ಶಾಲೆಗಳಿಗೆ ಭೇಟಿ ನೀಡಿದ್ದೇನೆ.
ವಿಶೇಷವಾಗಿ ಈ ಭಾಗದಲ್ಲಿ ಶಿಕ್ಷಕರಿಗೆ ಚೈತನ್ಯ ತುಂಬಬೇಕು. ಶಿಕ್ಷಕರು, ಶಿಕ್ಷಕಿಯರು ಅತ್ಯಂತ ದುರ್ಗಮ ಪ್ರದೇಶದಲ್ಲಿ ಬಂದು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಮುಂದಿನ ವಾರ ಯಾದಗಿರಿ ಮಹಾರಾಷ್ಟ್ರದ ಗಡಿ ಇಂಡಿ ಭಾಗದ ಕೊನೆಯ ಗ್ರಾಮಕ್ಕೆ ತೆರಳುತ್ತೇನೆ ಎಂದರು.
ಯಾವುದೇ ಶಾಲೆಯಲ್ಲೂ ಕಲಿತರು ಕನ್ನಡವನ್ನು ಒಂದು ಭಾಷೆಯನ್ನಾಗಿ ಕಡ್ಡಾಯವಾಗಿ ಕಲಿಯಲೇಬೇಕು. ಹೀಗಾಗಿ, ಮಹಾರಾಷ್ಟ್ರ ನಾಯಕರು ಸ್ವಲ್ಪಮಟ್ಟಿಗೆ ಪ್ರಬುದ್ಧರಾಗಬೇಕು. ಇದು ಮಹಾರಾಷ್ಟ್ರ ರಾಜ್ಯದ ಹಿತದೃಷ್ಟಿಯಿಂದಲೂ ಒಳ್ಳೆಯದು.
ಗಡಿಭಾಗದಲ್ಲಿ ಸಾಕಷ್ಟು ದೂರದಿಂದ ನಡೆದುಕೊಂಡು ಬರುವ ವಿದ್ಯಾರ್ಥಿಗಳ ಸಮಸ್ಯೆ ಗಮನಕ್ಕೆ ಬಂದಿದೆ. ಹೀಗಾಗಿ, ಸಂಬಂಧಿಸಿದ ಗ್ರಾಮ ಪಂಚಾಯತ್ ಮಟ್ಟದಲ್ಲಿ 1ರಿಂದ 12ನೇ ತರಗತಿಯವರೆಗೆ ಶಿಕ್ಷಣ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.