ಬೆಳಗಾವಿ: ಕಬ್ಬಿನ ಬಾಕಿ ಬಿಲ್ ನೀಡದ ಎಂ. ಕೆ ಹುಬ್ಬಳ್ಳಿ ಮಲ್ಲಪ್ರಭಾ ಸಕ್ಕರೆ ಕಾರ್ಖಾನೆಯನ್ನು ಜಿಲ್ಲಾಡಳಿತ ಮುಟ್ಟುಗೋಲು ಹಾಕಿ 15 ದಿನಗಳು ಕಳೆದಿವೆ. 22 ಕೋಟಿ ರೂ. ಮೌಲ್ಯದ ಸಕ್ಕರೆ ಜಪ್ತಿ ಮಾಡಿಕೊಂಡಿದ್ದ ಜಿಲ್ಲಾಡಳಿತ ಸಕ್ಕರೆ ಮಾರಾಟಕ್ಕೆ ಟೆಂಡರ್ ಆಹ್ವಾನಿಸದೇ ಸೈಲೆಂಟ್ ಆಗಿ ಉಳಿದಿದೆ. ಹೀಗಾಗಿ ಕಾರ್ಖಾನೆಯಲ್ಲಿನ ಸಕ್ಕರೆ ಇರುವೆ ಪಾಲಾಗುತ್ತಿದೆ.
ಪ್ರಸಕ್ತ ವರ್ಷ ಮಲಪ್ರಭಾ ಸಕ್ಕರೆ ಕಾರ್ಖಾನೆ 21 ಕೋಟಿ ರೂ. ಕಬ್ಬಿನ ಬಾಕಿ ಉಳಿಸಿಕೊಂಡಿತ್ತು. ಕಬ್ಬಿನ ಬಾಕಿ ಬಿಲ್‍ಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸಿದ ಹೋರಾಟಕ್ಕೆ ಮಣಿದಿದ್ದ ಜಿಲ್ಲಾಡಳಿತ ಜುಲೈ 5ರಂದು ಕಾರ್ಖಾನೆಯನ್ನ ಮುಟ್ಟುಗೋಲು ಹಾಕಿತ್ತು. ಜಿಲ್ಲಾಡಳಿತದ ಗಟ್ಟಿ ನಿರ್ಧಾರಕ್ಕೆ ಖುಷಿ ಪಟ್ಟಿದ್ದ ಕಬ್ಬು ಬೆಳೆಗಾರರು ಇದೀಗ ಜಿಲ್ಲಾಡಳಿತದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಕ್ಕರೆ ಮಾರಾಟಕ್ಕೆ ಟೆಂಡರ್ ಆಹ್ವಾನಿಸದೇ ಅಥವಾ ಕಾರ್ಖಾನೆ ಆಡಳಿತ ಮಂಡಳಿಗೂ ಸಕ್ಕರೆ ಮಾರಾಟ ಮಾಡುವಂತೆ ಸೂಚಿಸದೇ ಜಿಲ್ಲಾಡಳಿತ ಮೌನಕ್ಕೆ ಶರಣಾಗಿದೆ ಎನ್ನಲಾಗ್ತಿದೆ. ಕಬ್ಬು ಪೂರೈಸಿ ಆರೇಳು ತಿಂಗಳು ಕಳೆದರೂ ಬಾಕಿ ಬಿಲ್‍ಗಾಗಿ ರೈತರು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.
ಕಬ್ಬು ಬೆಳೆಗಾರರ ಸಮಾಧಾನಪಡಿಸಲು ಜಿಲ್ಲಾಡಳಿತವು ಕಾರ್ಖಾನೆ ಮುಟ್ಟುಗೋಲು ಹಾಕಿ ಕೈತೊಳೆದುಕೊಂಡಿದೆ. ಹೀಗಾಗಿ ಜಿಲ್ಲಾಡಳಿತದ ಗಟ್ಟಿ ನಿರ್ಧಾರ ಇತ್ತ ಕಾರ್ಖಾನೆ ಮಾಲೀಕರಿಗೂ ಹಾಗೂ ಕಬ್ಬು ಬೆಳೆಗಾರರಿಗೂ ಪ್ರಯೋಜನವಾಗುತ್ತಿಲ್ಲ. ಜಿಲ್ಲಾಡಳಿತವಾದರೂ ಸಕ್ಕರೆ ಮಾರಾಟಕ್ಕೆ ಟೆಂಡರ್ ಕರೆಯಬೇಕು ಅಥವಾ ಕಾರ್ಖಾನೆ ಆಡಳಿತ ಮಂಡಳಿಗಾದರೂ ಸಕ್ಕರೆ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಕಬ್ಬು ಬೆಳೆಗಾರರು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದಾರೆ. ಇನ್ನಾದರೂ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಎಚ್ಚೆತ್ತುಕೊಳ್ಳುವರೇ ಎನ್ನುವುದನ್ನು ಕಾದು ನೋಡಬೇಕಿದೆ.