ಬೆಳಗಾವಿ : ಚಳಿಗಾಲದ ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದಂತೆ ಬೆಳಗಾವಿಯ ಸುವರ್ಣಸೌಧದಲ್ಲಿ ಸಕ್ಕರೆ ಆಯುಕ್ತಾಲಯ ಕಚೇರಿಯನ್ನು ಸ್ಥಾಪಿಸಲಿದ್ದು, ಬೆಂಗಳೂರಿನಲ್ಲಿಯೂ ಕಚೇರಿ ಕಾರ್ಯ ನಿರ್ವಹಣೆ ಮಾಡಲಿದೆ. ಆಯಾ ಭಾಗದ ರೈತರು ಸಮೀಪದ ಕಚೇರಿಗೆ ಭೇಟಿ ನೀಡಿ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶರವಣ ಕೇಳಿದ ಬೆಳಗಾವಿಯಲ್ಲಿ ಸಕ್ಕರೆ ಆಯುಕ್ತಾಲಯ ಸ್ಥಾಪನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಕ್ಕರೆ ಆಯುಕ್ತಾಲಯ ಬೆಳಗಾವಿಗೆ ಸ್ಥಳಾಂತರ ಮಾಡುವ ಕುರಿತು ಸಿಎಂ ಆದೇಶ ಮಾಡಿದ್ದು, ಅಧಿವೇಶನ ಮುಗಿಯುತ್ತಿದ್ದಂತೆ ಸ್ಥಳಾಂತರ ಮಾಡುವ ನಿರ್ಧಾರ ಮಾಡಲಾಗಿದೆ. ಮಂಡ್ಯ, ಮೈಸೂರು ಭಾಗದ ರೈತರು ಇಲ್ಲಿಗೆ ಬರಬೇಕಾ ಅಥವಾ ಅಲ್ಲಿಯೇ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆಯಾ ಎನ್ನುವ ಪ್ರಶ್ನೆ ಇದೆ. ಬೆಂಗಳೂರಿನಲ್ಲಿಯೂ ಕಚೇರಿ ಇರಲಿದೆ. ಆ ಭಾಗದವರು ಅಲ್ಲಿಯೇ ಹೋಗಬಹುದು ಈ ಭಾಗದವರು ಇಲ್ಲಿಗೆ ಬರಬಹುದು. ಎರಡೂ ಕಡೆ ಕಾರ್ಯ ನಿರ್ವಹಣೆ ಮಾಡಲಿದೆ. ಎರಡೂ ಕಡೆ ಅಧಿಕಾರಿಗಳು ಇರಲಿದ್ದಾರೆ. ಸುವರ್ಣಸೌಧದಲ್ಲಿಯೇ ಕಚೇರಿ ತೆರೆಯಲಾಗುತ್ತದೆ ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದರು.
ನೇಕಾರರಿಗೆ ಪರಿಹಾರ: ಕೋವಿಡ್-19ನಿಂದಾಗ ಮೃತರಾದ ನೇಕಾರರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಯಾರದ್ದಾದರೂ ಹೆಸರು ಬಿಟ್ಟು ಹೋಗಿದ್ದರೆ ಪರಿಶೀಲಿಸಿ ಅಂಥವರ ಕುಟುಂಬಕ್ಕೂ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜವಳಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ತಿಳಿಸಿದರು.
ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ರಾಜ್ಯದಲ್ಲಿರುವ ನೇಕಾರರ ಸಮಸ್ಯೆಗಳು ಮತ್ತು ಸರ್ಕಾರದಿಂದ ಅವರಿಗೆ ಇರುವ ಸೌಲಭ್ಯಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿದ್ಯುತ್ ಕೈಮಗ್ಗದ ನೇಕಾರರು ತಮಿಳುನಾಡು ಮಾದರಿ ವ್ಯವಸ್ಥೆ ಬೇಡಿಕೆ ಇಟ್ಟಿದ್ದು, ಸಿಎಂ ಅಧ್ಯಕ್ಷತೆಯಲ್ಲಿ 17ರಂದು ಸಭೆ ನಡೆಸಿ ನೇಕಾರರ ಬಹಳ ವರ್ಷದ ಸಮಸ್ಯೆಗಳಲ್ಲಿ ಶೇ.90 ರಷ್ಟು ಸಮಸ್ಯೆಯನ್ನು ಪರಿಹರಿಸಲಾಗಿದೆ. ಇದಕ್ಕಾಗಿ ಸುವರ್ಣಸೌಧದಲ್ಲಿಯೇ ಸಿಎಂಗೆ ಅಭಿನಂದನೆ ಸಲ್ಲಿಸಲಾಗಿದೆ. ಸರ್ಕಾರ ನೇಕಾರರ ಪರವಾಗಿಯೇ ಇದೆ. ಕೋವಿಡ್ ವೇಳೆ ನಿಧನರಾದ ನೇಕಾರರಿಗೆ ಸಿಎಂ ಪರಿಹಾರ ನಿಧಿಯಿಂದ 2 ಲಕ್ಷ ಜಮೆ ಮಾಡಲಾಗಿದೆ. ಉಳಿದಿದ್ದರೆ ಅವರಿಗೂ ಕೊಡಲಾಗುತ್ತದೆ ಎಂದು ಭರವಸೆ ನೀಡಿದರು.
ಉದ್ಯೋಗ ನೀಡಲು ವಿಳಂಬ ಮಾಡಿದರೆ ಕ್ರಮ: ಜವಳಿ ಪಾರ್ಕ್‌ಗಳಲ್ಲಿ ಉದ್ಯೋಗ ನೀಡುವಲ್ಲಿ ವಿಳಂಬ ಮಾಡುತ್ತಿದ್ದರೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಕೆ.ಎಸ್.ನವೀನ್, ಪ್ರತಿ ಜಿಲ್ಲೆಗೆ ಜವಳಿ ಪಾರ್ಕ್ ಸ್ಥಾಪನೆ ಕುರಿತು ಮತ್ತು ಉದ್ಯೋಗ ನೀಡಿಕೆಯಲ್ಲಿ ವಿಳಂಬವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಜವಳಿ ಪಾರ್ಕ್ ಮಾಡುತ್ತಿರುವುದು ರಿಯಲ್ ಎಸ್ಟೇಟ್ ಲಾಭಕ್ಕೆ ಎನ್ನುವ ಆರೋಪ ಮಾಡಿದ್ದಾರೆ. ನಾನೇ ಖುದ್ದು ಪರಿಶೀಲನೆ ಮಾಡಿ ಉದ್ಯೋಗ ನೀಡಲು ವಿಳಂಬ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಮೈಸೂರಿನಲ್ಲಿ ಸಿಲ್ಕ್ ಕ್ಲಸ್ಟರ್ ಮಾಡಿದ್ದೇವೆ. ಹಲವು ಕಡೆ ಜವಳಿ ಪಾರ್ಕ್ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಸದನ ಎಷ್ಟು ದಿನ ನಡೆಯುತ್ತೆ ಅನ್ನೋ ಕಾಮನ್ ಸೆನ್ಸ್ ಇಲ್ಲವೇ: ಅಧಿಕಾರಿಗಳ ವಿರುದ್ಧ ಸಭಾಪತಿ ಗರಂ