ಬೆಳಗಾವಿ: ಇವರು 45ಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳ ಧ್ವನಿ ಅನುಕರಣೆ ಮಾಡುತ್ತಾರೆ. 81ರ ವಯಸ್ಸಿನಲ್ಲೂ ಕುಗ್ಗಿಲ್ಲ ಇವರ ಉತ್ಸಾಹ. ಆದರೆ ಇಷ್ಟೆಲ್ಲಾ ಕಲೆ ಇದ್ದರೂ ತಪ್ಪಿಲ್ಲ ಸಂಕಷ್ಟ. ಇಳಿ ವಯಸ್ಸಿನಲ್ಲಿರುವ ಈ ಕಲಾವಿದನಿಗೆ ಬೇಕಿದೆ ಸರ್ಕಾರದ ನೆರವು ಮತ್ತು ಪ್ರೋತ್ಸಾಹ. ಬಡ ಕಲಾವಿದನ ಕುರಿತಾದ ಕರುಣಾಜನಕ ಸ್ಟೋರಿ ಇಲ್ಲಿದೆ..
ಹೌದು, ಇವರ ಹೆಸರು ಸಿದ್ದಪ್ಪ ಉದ್ದಪ್ಪ ಖಿಲಾರಿ. ಊರು ಗೋಕಾಕ್ ತಾಲೂಕಿನ ಬೆಣಚಿನಮರಡಿ. ಹುಟ್ಟು ಕಲಾವಿದ ಆಗಿರುವ ಸಿದ್ದಪ್ಪ ಪ್ರಾಣಿ ಪಕ್ಷಿಗಳ ಧ್ವನಿ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಿಂದ ಕಲಾ ಸೇವೆಗೈಯುತ್ತಿರುವ ಇವರು ಪುತ್ರನ ಜೊತೆಗೆ ಮುರಕಲು ಮನೆಯಲ್ಲೇ ವಾಸ ಆಗಿರೋದು ನೋಡಿದರೆ, ಎಂತವರ ಕರಳು ಕೂಡ ಚುರಕ್ ಎನ್ನದೇ ಇರಲು ಸಾಧ್ಯವಿಲ್ಲ. ಅವರಿದ್ದ ಮನೆ ಯಾವ ಕ್ಷಣದಲ್ಲಾದರೂ ಬೀಳುವ ಸ್ಥಿತಿಯಲ್ಲಿದೆ. ಆದರೂ ಸರ್ಕಾರ ಮತ್ತು ಜಿಲ್ಲಾಡಳಿತ ಈ ಹಿರಿಯ ಕಲಾವಿದನ ನೆರವಿಗೆ ಇದುವರೆಗೂ ಬಂದಿಲ್ಲ.
ಅನುಕರಣೆಯಿಂದ ಕಲಾವಿದನಾದ ಸಿದ್ದಪ್ಪ.. ಆರಂಭದಲ್ಲಿ ಕೇವಲ ಮೂರು ಪ್ರಾಣಿಗಳ ಧ್ವನಿ ಅನುಕರಣೆ ಮಾಡುತ್ತಿದ್ದ ಸಿದ್ದಪ್ಪ ಅವರು ಇಂದು 45ಕ್ಕೂ ಅಧಿಕ ಪ್ರಾಣಿ, ಪಕ್ಷಿಗಳನ್ನು ಅನುಕರಿಸುತ್ತಾರೆ. ಕುರಿ, ಕೋಳಿ, ಹಸು, ನಾಯಿ ಬೆಕ್ಕು, ಕಾಡು ಕೋಣ, ಕಪ್ಪೆ, ಚಿಕ್ಕ ಮಗು ಅಳುವುದು, ಹೋರಿ, ಹಸು, ಕೋಗಿಲೆ, ಕಪ್ಪೆ ಸೇರಿ ಬಹುತೇಕ ಎಲ್ಲ ಪ್ರಾಣಿ, ಪಕ್ಷಿಗಳಂತೆಯೇ ಕೂಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಇನ್ನು ವಿಮಾನ ಹಾರಾಟವನ್ನೂ ಅನುಕರಿಸುತ್ತಾರೆ. ಹಳ್ಳಿಯಿಂದ ದಿಲ್ಲಿಯವರೆಗೂ ಹೋಗಿ ತಮ್ಮ ಕಲೆ ಪ್ರದರ್ಶಿಸಿ ನಾಡಿನ ಕೀರ್ತಿ ಹೆಚ್ಚಿಸಿದ್ದಾರೆ. ಸತೀಶ ಶುಗರ್ಸ್ ಅವಾರ್ಡ್ ಸೇರಿ ಜಿಲ್ಲೆಯಲ್ಲಿ ಆಯೋಜಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಿದ್ದಪ್ಪ ಹಾಜರಿ ಇದ್ದೇ ಇರುತ್ತದೆ. ಬರಿಗಾಲ ಫಕೀರನಂತಿರುವ ಸಿದ್ದಪ್ಪ ಆಯೋಜಕರು ಕೊಡುವ ಅಷ್ಟೋ ಇಷ್ಟು ಹಣದಿಂದ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.
ನಾನು ಇದೆಲ್ಲಾ ಮಾಡಿದ್ದು ಚಂದಕ್ಕೆ, ಈಗ ನಾನು ಇಳಿಯವಯಸ್ಸಿನಲ್ಲಿದ್ದು, ಸರ್ಕಾರ ಪ್ರತಿ ತಿಂಗಳು ವೇತನ ಮತ್ತು ಉಚಿತ ಬಸ್ ಪಾಸ್ ನೀಡಿದರೆ ತುಂಬಾ ಅನುಕೂಲ ಆಗುತ್ತದೆ ಎಂದು ಸಿದ್ದಪ್ಪ ಈಟಿವಿ ಭಾರತ ಮೂಲಕ ಮನವಿ ಮಾಡಿದ್ದಾರೆ.
ಸಿದ್ದಪ್ಪ ಖಿಲಾರಿ ಅವರ ಧ್ವನಿ ಅನುಕರಣೆ ಕಲಿತಿದ್ದರ ಹಿಂದೆ ಒಂದು ರೋಚಕ ಕಥೆಯಿದೆ. ಚಿಕ್ಕವರಿದ್ದಾಗ ಮನೆ ಮುಂದೆ ಬಂದು ಕುಳಿತುಕೊಳ್ಳುತ್ತಿದ್ದ ಕಾಗೆ, ಕೋಗಿಲೆ, ಕಪ್ಪೆ, ನಾಯಿ, ಕೋಳಿ ಸೇರಿ ವಿವಿಧ ಪ್ರಾಣಿ ಪಕ್ಷಿಗಳ ಕೂಗುವುದನ್ನು ನೋಡಿ ತಾನು ಕೂಡ ಇವುಗಳಂತೆ ಕೂಗಬೇಕೆಂದು ನಿಶ್ಚಯಿಸಿ ಇಷ್ಟಪಟ್ಟು ಶ್ರಮವಹಿಸಿ ಕಲಿತಿದ್ದಾರೆ. ಗೋಕಾಕ್ ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ನಡೆಯುವ ಜಾತ್ರೆ, ಸಭೆ, ಸಮಾರಂಭಗಳಲ್ಲಿ ಸಿದ್ದಪ್ಪ ಅವರ ಧ್ವನಿ ಕಲೆ ಕಂಡು ಜನ ಬೇಷ್ ಎನ್ನುತ್ತಾರೆ.
ಬಸಪ್ಪ ಹಲಗಿ ಎಂಬುವವರು ಮಾತನಾಡಿ, ಅನೇಕ ವರ್ಷಗಳಿಂದ ಈ ಅಜ್ಜನನ್ನು ನೋಡಿಕೊಂಡು ಬಂದಿದ್ದೇವೆ. ಜೀವನದ ಮುಸ್ಸಂಜೆಯಲ್ಲಿರುವ ಇವರಿಗೆ ಸರ್ಕಾರ ಆರ್ಥಿಕ ನೆರವು ನೀಡಿ, ದೇಶಿ ಕಲೆ ಮತ್ತು ಇಂತಹ ಬಡ ಕಲಾವಿದರನ್ನು ಬದುಕಿಸುವ ಕೆಲಸ ಮಾಡಲಿ ಎಂದು ಮನವಿ ಮಾಡಿಕೊಂಡರು.
ಈಟಿವಿ ಭಾರತ್ ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರನ್ನು ಸಂಪರ್ಕಿಸಿದಾಗ, ಆ ಕಲಾವಿದರು ನಮ್ಮ ಇಲಾಖೆಗೆ ಬಂದು ಅರ್ಜಿ ಸಲ್ಲಿಸಿದರೆ, ಪರಿಶೀಲಿಸಿ ಮಾಸಾಶನ ಮಂಜೂರು ಮಾಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೇ 58 ವರ್ಷ ಮೇಲ್ಪಟ್ಟ ಅರ್ಹ ಕಲಾವಿದರು ಯಾರೇ ಆಗಲಿ ಮಾಸಾಶನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಸಲಹೆ ನೀಡಿದರು.
ಒಟ್ಟಾರೆ ಇಂತಹ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಮತ್ತು ಅಧಿಕಾರಿಗಳು ಮಾಡಬೇಕಿದೆ.
ಇದನ್ನೂ ಓದಿ: ಇಂಟರ್ ಎಕ್ಸಾಂ ಫೇಲ್ ಆದರೂ ವರ್ಷಕ್ಕೆ 27 ಲಕ್ಷ ರೂ. ಸಂಪಾದಿಸುತ್ತಿರುವ ಅನಿಮೇಷನ್ ಕಲಾವಿದ