ಬೆಳಗಾವಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕಾಯುವಂತೆ ಗೋಕಾಕ್ ಕ್ಷೇತ್ರದ ಜನತೆ, ರಮೇಶ್ ಜಾರಕಿಹೊಳಿ ದರ್ಶನಕ್ಕೆ ಕಾಯಬೇಕು ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನಸ್ಸಿಗೆ ಬಂದಾಗ ಮಾತ್ರ ರಮೇಶ ಗೋಕಾಕಿಗೆ ಬಂದು ಹೋಗ್ತಾರೆ. ರಮೇಶ್ ಜಾರಕಿಹೊಳಿಗಾಗಿ ಗೋಕಾಕ್ ಜನ ಮತ್ತೆ ಐದು ವರ್ಷ ಕಾಯಬೇಕು. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕಾಯುವ ಹಾಗೆ, ರಮೇಶ್ ದರ್ಶನಕ್ಕೆ ಗೋಕಾಕ ಜನ ಕಾಯಬೇಕು ಎಂದರು.
ಅಳಿಯ ಅಂಬೀರಾವ್ ಪಾಟೀಲ್ ಎಲ್ಲ ಆಪರೇಟ್ ಮಾಡ್ತಾನೆ. ಗೋಕಾಕ್ ನಲ್ಲಿ 60 ಸಾವಿರ ಜನರು ವೋಟ್ ಹಾಕಿದ್ದಾರೆ. ಅವರ ರಕ್ಷಣೆ ನಮ್ಮ ಜವಾಬ್ದಾರಿ. ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೊಡೋದು ಅವರ ಪಕ್ಷಕ್ಕೆ ಬಿಟ್ಟಿದ್ದು ಎಂದು ಪ್ರತಿಕ್ರಿಯೆ ನೀಡಿದರು.
ಮೀಟಿಂಗ್ ದೆಹಲಿಗೆ ಶಿಫ್ಟ್:
ಕೆಪಿಸಿಸಿಗೆ ನೂತನ ಅಧ್ಯಕ್ಷರ ಆಯ್ಕೆ ಮೀಟಿಂಗ್ ದೆಹಲಿಗೆ ಶಿಫ್ಟ್ ಆಗಿದೆ. ಅಲ್ಲಿ ಎಲ್ಲರ ಅಭಿಪ್ರಾಯ ಪರಿಗಣಿಸಿ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಪರ, ವಿರೋಧ ಇದ್ದೇ ಇರುತ್ತದೆ. ಎಲ್ಲ ಪಕ್ಷಗಳಲ್ಲೂ ಬಣ ಇದ್ದೇ ಇರುತ್ತೆ, ಅದೇನೂ ಹೊಸದೇನಲ್ಲ ಎಂದರು.
ಎಲ್ಲ ಪಕ್ಷಗಳಲ್ಲೂ ಪರ-ವಿರೋಧದ ಬಣ ಇದ್ದೇ ಇರುತ್ತೆ:
ಬಿಜೆಪಿಯಲ್ಲೂ ಯಡಿಯೂರಪ್ಪ ಪರ, ವಿರೋಧ ಬಣಗಳು ಇವೆ. ಜೆಡಿಎಸ್‌ನಲ್ಲೂ ಕುಮಾರಸ್ವಾಮಿ ಪರ, ವಿರೋಧ ಗುಂಪುಗಳಿವೆ. ಎಲ್ಲ ಪಕ್ಷಗಳಲ್ಲೂ ಬಣಗಳು ಇದ್ದೇ ಇರುತ್ತವೆ. ಅದರ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯಕತೆ ಇಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಹೈಕಮಾಂಡ್ ನಿರ್ಣಯವೇ ಅಂತಿಮ. ಎಲ್ಲ ನಾಯಕರೂ ಸೇರಿ ದೆಹಲಿಗೆ ಹೋಗುತ್ತೇವೆ. ಮೂಲ ಕಾಂಗ್ರೆಸ್, ವಲಸಿಗ ಕಾಂಗ್ರೆಸ್ ಅಂತ ನಾವೆಂದೂ ಭಾವಿಸಿಲ್ಲ. ಮಧುಸೂದನ್ ಮಿಸ್ತ್ರಿಯವರು ಹೈಕಮಾಂಡ್ ಗೆ ಹೆಸರು ಶಿಫಾರಸು ಮಾಡುತ್ತಾರೆ. ಯಾರ ಹೆಸರು ಶಿಫಾರಸು ಮಾಡ್ತಾರೆ ಗೊತ್ತಿಲ್ಲ ಎಂದರು.
ಮಹದಾಯಿ ವಿಚಾರದಲ್ಲಿ ರಾಜಕೀಯ:
ಕಳಸಾ ಬಂಡೂರಿ ಯೋಜನೆ ಜಾರಿಯ ವಿಚಾರದಲ್ಲಿ ವಿಪಕ್ಷದಲ್ಲಿದ್ದಾಗ ಹೋರಾಟ ಮಾಡಿದ್ದ ಬಿಜೆಪಿ, ಈಗ ಸೈಲೆಂಟ್ ಆಗಿದೆ. ಮಹದಾಯಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಹಾದಾಯಿ ಮರೆತಂತಿದೆ. ಉಪಚುನಾವಣೆ ವೇಳೆ ಮಹದಾಯಿ ವಿಚಾರವಾಗಿ ಕೇಂದ್ರದಿಂದ ಪತ್ರ ತೋರಿಸಿ ಜನರಿಗೆ ಬಿಜೆಪಿ ಮೋಸ ಮಾಡಿದೆ. ಗೋವಾ ರಾಜ್ಯಪಾಲರೇ ಇದನ್ನು ಬಹಿರಂಗ ಪಡಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರೋವರೆಗೂ ಎಲ್ಲವನ್ನು ಮಾತನಾಡಿ ಆ ಮೇಲೆ ಸೈಲೆಂಟ್ ಆಗ್ತಾರೆ. ಜನರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದರು.