ಬೆಳಗಾವಿ: ತಾಯಿಯ ಪ್ರೀತಿ, ತಂದೆಯ ಪ್ರೋತ್ಸಾಹವೊಂದಿದ್ದರೆ ಸಾಕು ಯಾವುದೇ ಮಕ್ಕಳಿರಲಿ ಏನಾದರೂ ಸಾಧನೆ ಮಾಡಬಹುದು ಎಂಬುವುದಕ್ಕೆ ಕುಂದಾನಗರಿಯ ಮಧ್ಯಮ ಕುಟುಂಬದ ಈ ಬಾಲಕನೇ ಸಾಕ್ಷಿ. ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿರುವ ಪ್ರನೀತ್ ಎಂಬ ವಿದ್ಯಾರ್ಥಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 100 ಕ್ಕೆ 98.72ರಷ್ಟು ಅಂಕ ಪಡೆಯುವ ಮೂಲಕ ಈ ಸಾಧನೆಗೈದಿದ್ದಾನೆ.
ಹೌದು, ಮೂಲತಃ ಧಾರವಾಡ ನಿವಾಸಿಯಾಗಿರುವ ಪ್ರನೀತ್ ಕಲ್ಯಾಣಶೆಟ್ಟಿ ಬೆಳಗಾವಿಯ ಸೇಂಟ್ ಪಾಲ್ಸ್ ಪ್ರೌಢ್ ಶಾಲೆಯ ವಿದ್ಯಾರ್ಥಿ. ಈಚೆಗೆ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 617 ಅಂಕಗಳನ್ನು ಪಡೆದುಕೊಂಡಿದ್ದಾನೆ. ಇಂಗ್ಲಿಷ್ 125ಕ್ಕೆ 125, ಕನ್ನಡ 100ಕ್ಕೆ 100, ಹಿಂದಿ 100ಕ್ಕೆ 100, ಗಣಿತ 100ಕ್ಕೆ 100, ವಿಜ್ಞಾನ 100ಕ್ಕೆ 100, ಸಮಾಜ ವಿಜ್ಞಾನ 100ಕ್ಕೆ 97 ಅಂಕ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಸಾಧನೆ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ವಿದ್ಯಾರ್ಥಿ ಪ್ರನೀತ್, ನನ್ನ ಸಾಧನೆಗೆ ನನ್ನ ತಂದೆ-ತಾಯಿ, ಅಜ್ಜ-ಅಜ್ಜಿಯ ಪ್ರೋತ್ಸಾಹದ ಜೊತೆಗೆ ಗುರುಗಳ ಮಾರ್ಗದರ್ಶನವೇ ಕಾರಣ. ಎಷ್ಟು ಗಂಟೆಗಳು ಅಧ್ಯಯನ ಮಾಡುತ್ತೇವೆ ಎಂಬುವುದು ಮುಖ್ಯವಲ್ಲ. ಹೇಗೆ ಅಧ್ಯಯನ ಮಾಡುತ್ತೇವೆ, ಓದಿರುವ ವಿಷಯಗಳನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ ಎಂಬುವುದು ಮುಖ್ಯವಾಗುತ್ತದೆ. ಶ್ರದ್ಧೆಯಿಂದ ಓದಿದ್ರೆ ಮಾತ್ರ ಉತ್ತಮ ಅಂಕ ಬರಲು ಸಾಧ್ಯ. ತನಗೆ ಎಂಜಿನಿಯರ್ ಆಗುವ ಆಸೆ ಇದೆ. ಹೀಗಾಗಿ ಈಗಾಗಲೇ ಆ ಕುರಿತು ಅಧ್ಯಯನ ಮಾಡುತ್ತಿದ್ದೇನೆ. ಅದಕ್ಕೂ ಮೊದಲು ಜೆಇಇ ಮಾಡಬೇಕು. ಐಐಟಿ ಮಾಡುವ ಗುರಿ ಇಟ್ಟುಕೊಂಡಿದ್ದೇನೆ. ಅದರಂತೆ ಅಧ್ಯಯನ ಆರಂಭಿಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾನೆ.
ಪ್ರನೀತ್ ಓದಿನಲ್ಲಿ ಅಷ್ಟೇಯಲ್ಲದೇ ಬಹುಮುಖ ಪ್ರತಿಭೆ. ಒಳ್ಳೆಯ ಹಾಡುಗಾರ, ಉತ್ತಮ ಸಂಗೀತಗಾರನ್ನಾಗಿದ್ದು, ಈಗಾಗಲೇ ಹಿಂದುಸ್ಥಾನಿ ಸಂಗೀತದಲ್ಲಿ ಐದು ಪರೀಕ್ಷೆಗಳನ್ನು ಉತ್ತೀರ್ಣನಾಗಿದ್ದಾನೆ. ಜೊತೆಗೆ ತಬಲಾ ವಾದನ, ಕ್ರೀಡೆಯಲ್ಲಿಯೂ ಪ್ರಶಸ್ತಿಗಳನ್ನು ಪಡೆದಿದ್ದಾನೆ. ಇದಲ್ಲದೇ ದೇಶ ಸೇವೆ ಮಾಡಬೇಕೆಂಬ ಹಂಬಲದಿಂದ ಎನ್ಸಿಸಿ ತರಬೇತಿ ಸೇರಿಕೊಂಡು ದೆಹಲಿಯಲ್ಲಿ ಕಳೆದ ವರ್ಷದ ನಡೆದ ಗಣರಾಜೋತ್ಸವ ಪರೇಡ್ನಲ್ಲಿ ಭಾಗಿಯಾಗಿದ್ದ. ಈ ವೇಳೆ ಹಾಡಿನ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದಿದ್ದಕ್ಕಾಗಿ ಈತನಿಗೆ ಪ್ರಧಾನಿಗಳು ಬೆಳ್ಳಿ ಪದಕ ನೀಡಿ ಗೌರವಿಸಿದ್ದಾರೆ. ಒಟ್ಟಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿರುವ ಮಗನ ಭವಿಷ್ಯ ಉಜ್ವಲವಾಗಿರಲಿ ಎಂಬುವುದೇ ನಮ್ಮ ಆಶಯ ಎನ್ನುತ್ತಾರೆ ವಿದ್ಯಾರ್ಥಿಯ ತಂದೆ ವಿಜಯ ಕಲ್ಯಾಣಶೆಟ್ಟಿ.