ಬೆಳಗಾವಿ: ನಗರದ ಹೊರವಲಯದ ಪಿರನವಾಡಿಯ ಚರ್ಚ್‌ವೊಂದರಲ್ಲಿ ಹಿಂದೂ ಯುವಕ ಅನುಮಾನಸ್ಪದವಾಗಿ ಮೃತಪಟ್ಟಿದ್ದಾನೆ. ಇದು ಆತ್ಮಹತ್ಯೆಯಲ್ಲ, ಕೊಲೆ. ಹತ್ಯೆಯ ಹಂತಕರನ್ನು 15 ದಿನದೊಳಗೆ ಬಂಧಿಸದಿದ್ದರೆ ಉಗ್ರ ತಿರುಗೇಟು ನೀಡುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಡಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬೆಳಗಾವಿಯ ಹೊರವಲಯದ ಪೀರನವಾಡಿಯಲ್ಲಿರುವ ಪ್ರಾರ್ಥನಾ ಮಂದಿರವೊಂದರಲ್ಲಿ ಸಂತೋಷ ನಾಯಕ ಎಂಬ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪ್ರಾರ್ಥನ ಮಂದಿರದ ಶೌಚಾಲಯದಲ್ಲಿ ಟಾವೆಲ್‌ನಿಂದ ನೇಣುಬಿಗಿದ ಸ್ಥಿತಿಯಲ್ಲಿ ಶವಪತ್ತೆಯಾಗಿದೆ. ಸಂತೋಷ ನಾಯಕನನ್ನು ವ್ಯವಸ್ಥಿತವಾಗಿ ಕೊಲೆ ನಡೆದಿರುವ ಬಗ್ಗೆ ಸಂಶಯವಿದೆ. ಕೊಲೆ ಆರೋಪಿಗಳನ್ನು 15 ದಿನದೊಳಗೆ ಬಂಧಿಸಬೇಕು. ಇಲ್ಲವಾದರೆ ಅದಕ್ಕೆ ಬೆಂಕಿ ಇಡಲಾಗುವುದು. ಪ್ರಕರಣ ಸಂಬಂಧ 15 ದಿನಗಳಲ್ಲಿ ಕ್ರಮ ಆಗಬೇಕು. ಇಲ್ಲವಾದರೆ ಶ್ರೀರಾಮ ಸೇನೆ ಕಾನೂನು ಕೈಗೆ ತಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಹೀರೇಬಾಗೇವಾಡಿಯಲ್ಲಿ ಗೋಪ್ರೇಮಿ ಶಿವು ಉಪ್ಪಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಶಿವು ಉಪ್ಪಾರ ಆರೋಪಿಸಿದ್ದ ವ್ಯಕ್ತಿಯ ವಿಚಾರಣೆ ಇನ್ನೂ ನಡೆಸಿಲ್ಲ. ಪ್ರಕರಣ ನಡೆದು ಒಂಬತ್ತು ತಿಂಗಳಾದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಕಾಲಹರಣ ಮಾಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು. ಶಿವು ಉಪ್ಪಾರ ಹಾಗೂ ಸಂತೋಷ ನಾಯಕ ಅವರ ಕೊಲೆ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಶಿವು ಉಪ್ಪಾರ ಕೊಲೆಯ ತನಿಖೆ ಚುರುಕುಗೊಳಿಸುವಂತೆ ರಾಜ್ಯದ ಎಲ್ಲ ಕಡೆಯಲ್ಲಿ ಧರಣಿ ನಡೆಸಲಾಗಿದೆ. ಈವರೆಗೆ ಪೊಲೀಸರು ಸೂಕ್ತ ತನಿಖೆ ನಡೆಸಿಲ್ಲ. 9 ತಿಂಗಳಿನಿಂದ ಪ್ರಕರಣದ ತನಿಖೆ ಆಗಿಲ್ಲ,15 ದಿನದೊಳಗೆ ಆರೋಪಿಯನ್ನು ತನಿಖೆಗೆ ಒಳಪಡಿಸಬೇಕು. ಇಲ್ಲವಾದಲ್ಲಿ ನಾವೇ ಆರೋಪಿಗಳನ್ನು ಒದ್ದು ಪೊಲೀಸ್ ಠಾಣೆಗೆ ತರುತ್ತೇವೆ ಎಂದು ಮುತಾಲಿಕ್ ಬೆಳಗಾವಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.