ಬೆಳಗಾವಿ : ಲಾಕ್‌ಡೌನ್ ತೆರವಾದ ಬಳಿಕ ಪ್ರವಾಸಿಗರಿಗೆ ಸಿಹಿ ಸುದ್ದಿ ನೀಡಿರುವ ಕೆಎಸ್ಆರ್‌ಟಿಸಿ ಬೆಳಗಾವಿಯ ವಿಭಾಗದಿಂದ ಪ್ರವಾಸಿ ತಾಣಗಳಿಗೆ ತೆರಳಲು ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷ ಬಸ್ ಸೇವೆಯನ್ನು ಒದಗಿಸಿದೆ.
ಜಿಲ್ಲೆಯ ಗೋಕಾಕ್ ಪಟ್ಟಣದ ಹೊರವಲಯದಲ್ಲಿರುವ ಗೋಕಾಕ್ ಫಾಲ್ಸ್, ಗೊಡಚಿನಮಲ್ಕಿ ಫಾಲ್ಸ್ ಹಾಗೂ ಹಿಡಕಲ್ ಡ್ಯಾಮ್ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳಿಗೆ ತೆರಳಲು ಸಾರ್ವಜನಿಕರಿಗೆ ಕೆಎಸ್ಆರ್‌ಟಿಸಿಯಿಂದ ವಿಶೇಷ ಬಸ್‌ಗಳನ್ನು ನೀಡುವ ಮೂಲಕ ಆರ್ಥಿಕ ಹೊಡೆತದಿಂದ ಮೇಲೇಳಲು ಪ್ರಯತ್ನಿಸುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಕೆಎಸ್ಆರ್‌ಟಿಸಿ ಡಿಸಿ ಎಂ.ಆರ್.ಮುಂಜಿ, ಲಾಕ್‌ಡೌನ್ ಹಿನ್ನೆಲೆ ಪ್ರಯಾಣಿಕರಿಗೆ ಪ್ಯಾಕೇಜ್ ಘೋಷಣೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಕೊರೊನಾ ಸೋಂಕು ಕಡಿಮೆ ಆಗುತ್ತಿರುವ ಪರಿಣಾಮ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷ ಬಸ್‌ಗಳನ್ನು ಒದಗಿಸಲಾಗಿದೆ.
ಇನ್ನು, ಅಂಬೋಲಿ ಫಾಲ್ಸ್‌ಗೂ ಬಸ್ ಸಂಚಾರ ಮಾಡಲಾಗುವುದು. ಆದ್ರೆ, ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಇರೋದ್ರಿಂದ ಈವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ಅಲ್ಲಿನ ಸರ್ಕಾರದಿಂದ ಬಂದಿಲ್ಲ. ಬಂದ ನಂತರ ಬಸ್ ಸಂಚಾರ ಪ್ರಾರಂಭಿಸಲಾಗಿವುದು. ಸಾರ್ವಜನಿಕರು ವಿಶೇಷ ಬಸ್‌ಗಳ ಸೇವೆಯನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.