ಬೆಳಗಾವಿ : ಭಾರತೀಯ ಸೇನೆಯಲ್ಲಿ ಬರೋಬ್ಬರಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ಸ್ವಗ್ರಾಮಕ್ಕೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಬೆಳಗಾವಿ ತಾಲೂಕಿನ ಪಂಥಬಾಳೇಕುಂದ್ರಿ ಗ್ರಾಮದ ಸಾಂಬ್ರಾ ಸಮೀಪದ ಆನಂದನಗರ ನಿವಾಸಿಯಾಗಿರುವ ಯೋಧ ಲಕ್ಷ್ಮಣ ಬೂತನವರ ಅವರಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಪಂಥ ಬಾಳೇಕುಂದ್ರಿ ಗ್ರಾಮದ ದುರ್ಗಾದೇವಿ ದೇವಾಲಯದಲ್ಲಿ ಗ್ರಾಮಸ್ಥರು ಸನ್ಮಾನಿಸಿದರು. ಉಡುಗೊರೆ, ಹೂಗುಚ್ಛ ನೀಡುವ ಜೊತೆಗೆ ಆರತಿ ಬೆಳಗಿ ಯೋಧನನ್ನ ಬರಮಾಡಿಕೊಳ್ಳಲಾಯಿತು. ಯೋಧನ ಸಾರ್ಥಕ ಸೇವೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ, ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು.
ಡಿಸೆಂಬರ್ 2000ರಲ್ಲಿ ಸೆಂಟಿನೆಲ್ಸ್ ರೆಜಿಮೆಂಟ್ ಮೂಲಕ ಲಕ್ಷ್ಮಣ ಸೇನೆಗೆ ಸೇರಿದ್ದರು. ಭಾರತದ ಹಲವು ಗಡಿ ಪ್ರದೇಶಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಕೆಲ ದಿನಗಳ ಕಾಲ ಎನ್ಎಸ್ಜಿ ವಿಂಗ್ನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿದ್ದ ಅವರು ಬಳಿಕ ನಿವೃತ್ತಿ ಹೊಂದಿದ್ದರು.
ಅದ್ದೂರಿ ಸ್ವಾಗತಕ್ಕೆ ಬೆರಗಾದೆ : ಈಟಿವಿ ಭಾರತ ಜೊತೆ ಮಾತನಾಡಿದ ಯೋಧ ಲಕ್ಷ್ಮಣ, 21 ವರ್ಷ ತಾಯ್ನಾಡಿನ ಸೇವೆ ಮಾಡಿ ಗ್ರಾಮಕ್ಕೆ ಮರಳಿದ್ದೇನೆ. ದೇಶಕ್ಕೆ ದುಡಿದ ಹೆಮ್ಮೆ, ಸಾರ್ಥಕ ಭಾವ ನನ್ನಲಿದೆ. ಸ್ವಾಗತಿಸುವ ಮಾಹಿತಿ ಇತ್ತು. ಆದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಮಾಡುತ್ತಾರೆ ಎಂಬ ಮಾಹಿತಿ ಇರಲಿಲ್ಲ. ಕಾರ್ಯಕ್ರಮ ನೆರವೇರಿಸಿದ ಮಾಜಿ ಸೈನಿಕರು, ಗ್ರಾಮಸ್ಥರು ಹಾಗೂ ಸಂಬಂಧಿಕರಿಗೆ ಆಭಾರಿ ಆಗಿದ್ದೇನೆ ಎಂದರು.
ಗ್ರಾಮಸ್ಥರಾದ ರಾಮಪ್ಪ ಹಟ್ಟಿ ಮಾತನಾಡಿ, ಯೋಧ ಇಂದು ತಾಯ್ನಾಡಿಗೆ ಮರಳಿದ್ದಾರೆ. ಅದ್ಧೂರಿಯಾಗಿ ಸ್ವಾಗತಿಸುವ ಕಾರ್ಯಕ್ಕೆ ಗ್ರಾಮದ ವತಿಯಿಂದ ನಾಂದಿ ಹಾಡಿದ್ದೇವೆ. ಯುವಕರು ಸೇನೆಗೆ ಹೆಚ್ಚೆಚ್ಚು ಸೇರಬೇಕು ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇಂಥ ಕಾರ್ಯಕ್ರಮಗಳು ಯುವಕರಿಗೆ ಪ್ರೇರಣೆಯಾಗುತ್ತವೆ ಎಂದರು.
ಇದನ್ನೂ ಓದಿ: ಲಖನ್ ಪರ ಬಹಿರಂಗ ಪ್ರಚಾರ.. ಮೊದಲ ಪ್ರಾಶಸ್ತ್ಯದ ಮತದ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿದ್ದಿಷ್ಟೇ..