ಬೆಳಗಾವಿ: ಭ್ರಷ್ಟಾಚಾರದ ಬಗ್ಗೆ ಸದನದಲ್ಲಿ ಚರ್ಚೆ ಮಾಡುವುದಕ್ಕೆ ಬಿಜೆಪಿ ಸರ್ಕಾರ ತಪ್ಪಿಸಿಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗುಡುಗಿದರು.
ಬೆಳಗಾವಿ ಚಳಿಗಾಲದ ಅಧಿವೇಶನ ಮುಗಿಸಿಕೊಂಡು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದಲ್ಲ ಒಂದು ನೆಪವನ್ನು ಹೇಳಿ ಸರ್ಕಾರ ಮತ್ತು ಸ್ಪೀಕರ್ ಭ್ರಷ್ಟಾಚಾರದ ಬಗ್ಗೆ ಚರ್ಚೆಗೆ ಬರುತ್ತಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಆರೋಪ ಅಷ್ಟೇ ಅಲ್ಲ, ಸರ್ಕಾರವು ಎಲ್ಲಾ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿದೆ. ಆಡು ಮುಟ್ಟದ ಸೊಪ್ಪಿಲ್ಲ, ಭ್ರಷ್ಟಾಚಾರ ಮಾಡದ ಇಲಾಖೆ ಇಲ್ಲ ಎಂಬಂತಾಗಿದೆ. ಇವರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. 50 ಪರ್ಸೆಂಟೇಜ್ ಮಾತ್ರವಲ್ಲದೇ ಪ್ರತಿಶತ ನೂರಷ್ಟು ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ಹೇಮಾವತಿ ಎಡದಂಡೆ ನಾಲೆಯಲ್ಲಿ ಕೆಲಸ ಮಾಡದೇ ಬಿಲ್ ತೆಗೆದಿದ್ದಾರೆ. ನಾರಾಯಣಪುರ ಬಲದಂಡೆ ನಾಲೆ ಕಾಮಗಾರಿಯಲ್ಲಿ 2000 ಚಿಲ್ಲರೆ ಕೋಟಿ ರೂಪಾಯಿ ಭ್ರಷ್ಟಾಚಾರ ಆಗಿದೆ.ಇದನ್ನೆಲ್ಲಾ ಸದನದಲ್ಲಿ ಚರ್ಚೆ ಮಾಡಬೇಕಾದರೆ, ನಮಗೆ ಅವಕಾಶವನ್ನೇ ಕೊಡುತ್ತಿಲ್ಲ. ಸರ್ಕಾರದ ಕುಮ್ಮಕ್ಕು ಇಲ್ಲದೇ ಇಷ್ಟು ದೊಡ್ಡ ಮಟ್ಟದ ಹಗರಣ ನಡೆಯಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಸದನದಲ್ಲಿ ಚರ್ಚೆ ಮಾಡಿದರೆ ಸಿಕ್ಕಿ ಹಾಕಿಕೊಳ್ಳುತ್ತೇವೆ ಎಂದು ಭಯದಿಂದ ಸದನವನ್ನು ಮೊಟಕುಗೊಳಿಸಿದ್ದಾರೆ. ಭ್ರಷ್ಟಾಚಾರದ ವಿಚಾರ ತಪ್ಪಿಸಲು ಸ್ಪೀಕರ್ ಸಹ ಸರ್ಕಾರಕ್ಕೆ ಸಹಾಯ ಮಾಡುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇಂತಹ ಭ್ರಷ್ಟ ಸರ್ಕಾರವನ್ನು ನೋಡಿಲ್ಲ. ಆರೋಪ ಮಾಡಿದವರನ್ನೇ ಸರ್ಕಾರ ಬಂಧಿಸುತ್ತದೆ, ಇದು ಎಂತಹ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಸದನ ನಡೆಸುವುದನ್ನು ಬಿಟ್ಟು ಇವರು ಓಡಿ ಹೋಗಿದ್ದಾರೆ. ಗುತ್ತಿಗೆದಾರರಿಂದ 42 ಕೋಟಿ ರೂಪಾಯಿ ಮರು ಪಾವತಿ ಮಾಡಿಕೊಂಡಿದ್ದೇವೆ ಎಂದು ಸರ್ಕಾರ ಹೇಳುತ್ತದೆ. ಭ್ರಷ್ಟಾಚಾರ ನಡೆದಿಲ್ಲ ಎಂದರೆ ಅವರಿಂದ ಏಕೆ ಹಣ ಮರು ಪಾವತಿ ಮಾಡಿಕೊಂಡರಿ?, ಭ್ರಷ್ಟಾಚಾರ ನಡೆದಿರುವುದರಿಂದಲೇ ಹಣ ಮರು ಪಾವತಿ ಮಾಡಿದ್ದಾರೆ. ಆದರೆ, ಆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಸರ್ಕಾರ ರೈತ ವಿರೋಧಿ ನೀತಿ ಬಿಟ್ಟು, ರೈತಸ್ನೇಹಿ ಕೆಲಸ ಮಾಡಲಿ: ಸಿದ್ದರಾಮಯ್ಯ
ಇನ್ನು ಸದನದಲ್ಲಿ ರೈತರ ಸಮಸ್ಯೆ ಬಗ್ಗೆ ಮಾತನಾಡಿದ್ದೇನೆ. ಹಾಲು, ಕಬ್ಬು, ಮೇಣಸು, ಅಡಿಕೆ ತೆಂಗು, ತೊಗರಿ, ರಾಗಿ, ಅಕ್ಕಿ ಬೆಳೆಗಾರರ ಬಗ್ಗೆ ಮಾತನಾಡಿದ್ದೇನೆ. ರೈತರಿಗೆ ಹಲವು ರೋಗ ಬಾಧೆಯಿಂದ ನಷ್ಟ ಸಂಭವಿಸಿದೆ. ಆದರೆ, ಸರ್ಕಾರ ಪರಿಹಾರ ನೀಡಿಲ್ಲ. ಸೂಕ್ತ ದತ್ತಾಂಶ ಕೂಡ ಇಲ್ಲ. ದಿನನಿತ್ಯ ಹಾಲು 18 ಲಕ್ಷ ಲೀಟರ್ ಕಡಿಮೆ ಆಗಿದೆ, ಭೂತಾನ್ನಿಂದ ಅಡಿಕೆ ಖರೀದಿ ಮಾಡುತ್ತಿದ್ದಾರೆ. ಒಂದು ಕ್ವಿಂಟಾಲ್ಗೆ 15000 ಸಾವಿರ ದರ ಕಡಿಮೆ ಆಗಿದೆ. ಇದಕ್ಕೆ ಉತ್ತರ ಕೊಡಿ ಎಂದರೆ ಅವರ ಬಳಿ ಉತ್ತರವಿಲ್ಲ ಎಂದು ಗುಡುಗಿದರು.
ಇದನ್ನೂ ಓದಿ; ಮೀಸಲಾತಿ ವಿಚಾರ: ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ ಸಿದ್ದರಾಮಯ್ಯ
ಮಹದಾಯಿ ವಿಚಾರ: ಮಹದಾಯಿ ಯೋಜನೆಗೆ ನಾವೇ ಹೋರಾಟ ಮಾಡಿದ್ದು, 2018 ರಲ್ಲಿ ಯಡಿಯೂರಪ್ಪ ಅಧಿಕಾರಕ್ಕೆ ಬಂದ್ರೆ 24 ಗಂಟೆಯಲ್ಲಿ ಬಗೆಹರಿಸಲಾಗುವುದು ಎಂದು ಹೇಳಿದ್ದರು. ಹೇಳಿ ಐದು ವರ್ಷ ಕಳೆದರೂ ಏನೂ ಮಾಡಿಲ್ಲ. ಡಬಲ್ ಇಂಜಿನ್ ಸರ್ಕಾರ ಏನ್ ಮಾಡ್ತಾ ಇದೆ?, ಈಗ ನಾವು ವಿಜಯಪುರದಲ್ಲಿ ಹೋರಾಟ ಇಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹದಾಯಿಗೆ ಡಿಪಿಆರ್ ಅನುಮೋದನೆ ನೀಡಿದೆ ಎಂದು ಹೇಳಿದರು.
ಇದನ್ನೂ ಓದಿ: ಈ ಸರ್ಕಾರದಲ್ಲಿ ಉ.ಕ ಭಾಗದ ಸಮಸ್ಯೆಗಳ ಚರ್ಚೆಗೆ ಅವಕಾಶ ಸಿಗಲಿಲ್ಲ: ಸಿದ್ದರಾಮಯ್ಯ ಆಕ್ರೋಶ