ಬೆಳಗಾವಿ: ಮುಖ್ಯಮಂತ್ರಿ ಆಗಬೇಕು ಇಲ್ಲವಾದರೆ ಕಾಂಗ್ರೆಸ್ ಸಂಪೂರ್ಣ ನಿರ್ನಾಮ ಆಗಬೇಕು ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಪರವಾಗಿ ಸುಪಾರಿ ತೆಗೆದುಕೊಂಡಿದ್ದಾರೆ. ಬಿಎಸ್ವೈ ಹಾಗೂ ಸಿದ್ದರಾಮಯ್ಯ ಆಂತರಿಕವಾಗಿ ಒಬ್ಬರಿಗೊಬ್ಬರು ವಿಶ್ವಾಸದಲ್ಲಿದ್ದಾರೆಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದರು. ಬೈಲಹೊಂಗಲ ತಾಲೂಕಿನ ತಡಸಲೂರ ಗ್ರಾಮದಲ್ಲಿ ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕೆಣಕಿ ಕೆಣಕಿ ಜೆಡಿಎಸ್ ಪಕ್ಷದ ವಿರುದ್ಧ ಮಾತನಾಡುತ್ತಾರೆ, ಅವರು ಮನೆಗೆ ಹೊಗುವ ಕಾಲ ಬಂದಿದೆ ಅದಕ್ಕೆ ಆತ ಆ ರೀತಿ ಮಾತನಾಡುತ್ತಾರೆ ಎಂದರು.
ಈ ಚುನಾವಣೆಯಲ್ಲಿ ಕೋಲಾರ ಅಭ್ಯರ್ಥಿ ಎಂದು ಹೇಳಿದ್ದಾರೆ, ಕೋಲಾರದಲ್ಲಿ ಏನು ಆಗುತ್ತದೆ ಎಂಬುದನ್ನು ಕಾದು ನೋಡಿ, ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಒಬ್ಬರಿಗೊಬ್ಬರು ಆಂತರಿಕವಾಗಿ ವಿಶ್ವಾಸದಲ್ಲಿದ್ದಾರೆ. 2008ರಲ್ಲಿ ಆಪರೇಷನ್ ಕಮಲ ಚುನಾವಣೆ ಸುಪಾರಿಯನ್ನು ಸಿದ್ದರಾಮಯ್ಯ ಅವರು ತೆಗೆದುಕೊಂಡರು, ಎಷ್ಟಕ್ಕೆ ತೆಗೆದುಕೊಂಡರು ಎಂದು ಸಿದ್ದರಾಮಯ್ಯ ಅವರಿಗೆ ನಾನು ಸಾವಿರ ಸಲ ಕೇಳಿದ್ದೇನೆ.
ಇದುವರೆವಿಗೂ ಉತ್ತರ ಬಂದಿಲ್ಲ, ಸಿದ್ದರಾಮಯ್ಯನವರು ಆತ್ಮಾವಲೋಕನ ಮಾಡಿಕೊಳ್ಳಬೇಕು, ನಾನು ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಕಾರಣ ಎಂದು ಹೇಳುತ್ತಾರೆ. ಬಿಜೆಪಿ ಇಷ್ಟು ಬೆಳೆದಿರುವುದಕ್ಕೆ ಸಿದ್ದರಾಮಯ್ಯ ನಡುವಳಿಕೆಯೇ ಕಾರಣ, ಈಗಲೂ ಬಿಜೆಪಿ ಪರವಾಗಿ ಸುಪಾರಿ ತೆಗೆದುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.
ಸದ್ಯದಲ್ಲೇ ಬೆಳಗಾವಿ ಜಿಲ್ಲೆ ಜೆಡಿಎಸ್ ಅಭ್ಯರ್ಥಿ ಪಟ್ಟಿ ಪ್ರಕಟ: ಇಡೀ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕನೇ ದಿನದ ಪ್ರವಾಸ ಕೈಗೊಳ್ಳುಲಾಗಿದೆ, ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನೇಮಕ ಮಾಡಲಾಗುವುದು, ಜಿಲ್ಲೆಯ 18 ಕ್ಷೇತ್ರಗಳಲ್ಲಿ ಹತ್ತು ವಿಧಾನಸಭಾ ಕ್ಷೇತ್ರದಲ್ಲಿ ಸಮಪರ್ಕ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು.
ಹಿಂದೆ 1994ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಜನತಾ ದಳ ಪಕ್ಷಕ್ಕೆ ಜನರು ಆಶೀರ್ವಾದ ಮಾಡಿದ್ದರು. ಈ ಬಾರಿಯೂ ಜನರು ಹಿಂದಿನ ಭಾವನೆ ವ್ಯಕ್ತಪಡಿಸಿದ್ದಾರೆ. ನಾನು ಮುಖ್ಯಮಂತ್ರಿ ಆಗಿರುವ ಸಮಯದಲ್ಲಿ ಸಾಲ ಮನ್ನಾ ಮಾಡಿರುವ ಸಮಯದಲ್ಲಿ ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಅನುಕೂಲವಾಗಿದೆ. 3000 ಸಾವಿರ ಕೋಟಿ ರೈತರ ಸಾಲ ಮನ್ನಾ ಯೋಜನೆ ಉಪಯೋಗಕ್ಕೆ ಬಂದಿದೆ, ನಮಗೆ ಅನುಕೂಲ ಮಾಡಿದ್ದಿರಿ ನಿಮಗೆ ಈ ವರ್ಷ ಮತ ನೀಡುತ್ತೇವೆ ಎಂದು ಜನರು ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಕೋಲಾರದಲ್ಲಿ ದಲಿತ ಮುಖ್ಯಮಂತ್ರಿ ಅಭಿಯಾನ ವಿಚಾರವಾಗಿ ಪ್ರತಿಕ್ರಿಯಿಸಿ ಯಾವುದೇ ಸಮಾಜದವರು ಮುಖ್ಯಮಂತ್ರಿ ಆಗುವುದಕ್ಕೆ ಸಂವಿಧಾನದ ಚೌಕಟ್ಟಿನಲ್ಲಿ ಆ ಒಂದು ಹಕ್ಕು ಕೊಟ್ಟಿದ್ದಾರೆ, ಆಯಾ ಪಕ್ಷದಗಳ ಶಾಸಕಾಂಗ ವಿಶ್ವಾಸ ಪಡೆದುಕೊಂಡು ಯಾರು ಬೇಕಾದರೂ ಮುಖ್ಯಮಂತ್ರಿ ಆಗುತ್ತಾರೆ. ಇಲ್ಲಿ ಯಾರೂ ಬೇಕಾದರೂ ಮುಖ್ಯಮಂತ್ರಿ ಆಗಬಹುದು ಆಗುವುದಕ್ಕೆ ಅವರಿಗೆ ಹಕ್ಕಿದೆ ಎಂದು ಹೇಳಿದರು.
ಜನರಿಗೆ ಭರವಸೆಗಳ ಮಹಾಪೂರ: ಪಂಚರತ್ನ ಯೋಜನೆ ಮೂಲಕ ನಾಡಿನ ಪ್ರತಿ ಕುಟುಂಬಕ್ಕೆ ನೆಮ್ಮದಿ ನೀಡುತ್ತೇವೆ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಒಂದು ಸಲ ರಾಜ್ಯದಲ್ಲಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತಂದರೆ, ಹಳ್ಳಿಗಳಲ್ಲೂ ಶ್ರೀಮಂತರು ಮಕ್ಕಳು ಕಲೆಯುವ ಶಿಕ್ಷಣ ಜಾರಿ ಮಾಡುತ್ತೇವೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ ಎಂದರು.
ಇನ್ನು ಎರಡು ಸಾವಿರ ರೈತರ ಪರಿಹಾರ ಬಿಜೆಪಿ ಸರ್ಕಾರ ನೀಡಿಲ್ಲ, ಅವರಿಗೆ ಪರಿಹಾರ ನೀಡುತ್ತೇವೆ. ಪ್ರತಿ ಎಕರೆಗೆ 10 ಸಾವಿರ ಹೀಗೆ 10 ಎಕರಿಗೆ 1ಲಕ್ಷ ಸಹಾಯ ಧನ, 24 ಗಂಟೆ ರೈತರಿಗೆ ಉಚಿತ ವಿದ್ಯುತ್ ವಿತರಣೆ, ಪ್ರತಿ ಕುಟುಂಬಕ್ಕೆ ಉದ್ಯೋಗ, ಮನೆ ಇಲ್ಲದವರಿಗೆ ಮನೆ, ಸ್ತ್ರೀ ಶಕ್ತಿ ಗುಂಪಿನ ಸಾಲ ಸಂಪೂರ್ಣ ಮನ್ನಾ ಮಾಡುತ್ತೇವೆ. 65 ಮೇಲ್ಪಟ್ಟವರಿಗೆ ಪ್ರತಿ ತಿಂಗಳು 5 ಸಾವಿರ ಮಾಶಾಸನ, ಅಂಗವಿಕಲರಿಗೆ, ವಿಧವೆಯರಿಗೆ 2500 ಸಾವಿರ ಮಾಶಾಸನ ಕೊಡುತ್ತೇವೆ. ಬೈಲಹೊಂಗಲ ಮತ ಕ್ಷೇತ್ರದ ಅಭ್ಯರ್ಥಿ ಶಂಕರ ಮಾಡಲಗಿ ಅವರನ್ನು ಗೆಲ್ಲಿಸಿ ನನ್ನ ಕೈ ಗಟ್ಟಿಗೊಳಿಸಿ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ:ಹಾಸನ ಅಭ್ಯರ್ಥಿ ತೀರ್ಮಾನ ಪಕ್ಷಕ್ಕೆ ಬಿಟ್ಟಿದ್ದು: ಮಾಜಿ ಸಚಿವ ರೇವಣ್ಣ