ಬೆಳಗಾವಿ: ನಗರದಲ್ಲಿ ಇಂದು ಬೆಳಗ್ಗೆ ವಶಕ್ಕೆ ಪಡೆಯಲಾದ 7 ಜನ ಪಿಎಫ್ಐ ಮುಖಂಡರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 110ರ ಅಡಿ ಪ್ರಕರಣ ದಾಖಲಾಗಿದ್ದು, ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.
ಆಜಂ ನಗರದ ನಿವಾಸಿ ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ಝಕೀವುಲ್ಲಾ ಫೈಜಿ, ಅಸಾದ್‌ಖಾನ್ ಸೊಸೈಟಿ ನಿವಾಸಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬೀದ್ ಖಾನ್ ಕಡೋಲಿ, ಶಿವಾಜಿ ನಗರದ ನಿವಾಸಿ ಸಲಾವುದ್ದೀನ್ ಖಿಲೆವಾಲೆ, ಅಸಾದ್‌ಖಾನ್ ನಿವಾಸಿ ಬದ್ರುದ್ದೀನ್ ಪಟೇಲ್, ಅಮನ್ ನಗರ ನಿವಾಸಿ ಸಮೀವುಲ್ಲಾ ಪೀರ್ಜಾದೆ, ಬಾಕ್ಸೈಟ್ ರೋಡ್ ನಿವಾಸಿ ಜಹೀರ್ ಘೀವಾಲೆ ಹಾಗೂ ವಿದ್ಯಾಗಿರಿ ನಿವಾಸಿ ರೆಹಾನ್ ಅಜೀಜ್(25) ಬಂಧಿತ ಆರೋಪಿಗಳು.
ಬಂಧಿತರ ಬಳಿಯಿದ್ದ ಮೊಬೈಲ್ ಜಪ್ತಿ ಮಾಡಿಕೊಂಡು ಇಂಚಿಂಚು ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ತನಿಖೆ ವೇಳೆ ಸಾಮಾಜಿಕ ಜಾಲತಾಣ ಅಕೌಂಟ್‌ಗಳು, ಯಾರ್ಯಾರ ಜೊತೆ ಸಂಪರ್ಕದಲ್ಲಿದ್ದರು?, ಎಸ್ಡಿಪಿಐ, ಪಿಎಫ್ಐ ಸಂಘಟನೆ ಸೇರಿದ್ದು ಯಾವಾಗ, ಏನೆಲ್ಲಾ ಕೆಲಸ ಮಾಡ್ತಾರೆ?, ಯಾವೆಲ್ಲ ವಾಟ್ಸ್ ಆ್ಯಪ್ ಗ್ರೂಪ್‌ಗಳಲ್ಲಿ ಆ್ಯಕ್ಟಿವ್ ಇದ್ದರು ಎಂಬುದರ ಬಗ್ಗೆ ವಿಚಾರಣೆ ಮಾಡಲಾಗುತ್ತಿದೆ.
ಸದ್ಯ ಬಂಧಿತ ಪಿಎಫ್ಐ ಕಾರ್ಯಕರ್ತರ ವಿರುದ್ಧ ಸಮಾಜ ಸ್ವಾಸ್ಥ್ಯ ಹಾಳುಗೆಡುವವ ಆರೋಪವಿದೆ. ಮುಂಜಾಗ್ರತಾ ಕ್ರಮವಾಗಿ ಏಳು ಜನ ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಿ ತಾಲೂಕಿನ ವಂಟಮೂರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದರು.
ಬಳಿಕ ಬಂಧಿತ ಏಳು ಜನ ಆರೋಪಿಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ. ಈ ವೇಳೆ ಪಿಎಫ್ಐ ಕಾರ್ಯಕರ್ತನೊಬ್ಬ 'ದಲಿತ ಮತ್ತು ಮುಸ್ಲಿಂ ಕ್ರೈಂ ಇನ್ ಇಂಡಿಯಾ' ಎಂದು ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ 7 ಮಂದಿ ಪಿಎಫ್ಐ ಮುಖಂಡರು ಪೊಲೀಸ್ ವಶಕ್ಕೆ