ಬೆಳಗಾವಿ: ಒಬ್ಬರಲ್ಲ, ಇಬ್ಬರಲ್ಲ, ಒಂದೂವರೆ ತಿಂಗಳಲ್ಲಿ ಬರೋಬ್ಬರಿ 30 ಜನರ ಅಕಾಲಿಕ ಮರಣ. ಈ ದಿಢೀರ್ ಸಾವುಗಳಿಗೆ ಕಾರಣವೇ ಗೊತ್ತಿಲ್ಲ. ಹೌದು, ಜಿಲ್ಲೆಯ ರಾಮದುರ್ಗ ತಾಲೂಕಿನ ತುರನೂರ ಗ್ರಾಮದಲ್ಲಿ ಸರಣಿ ಸಾವು ಸಂಭವಿಸುತ್ತಿರುವುದರಿಂದ ಊರಿನ ಜನರು ಆತಂಕಕ್ಕೊಳಗಾಗಿದ್ದಾರೆ. ಕಳೆದ 45 ದಿನಗಳ ಅಂತರದಲ್ಲಿ 30 ಜನ ಸಾವನ್ನಪ್ಪಿದ್ದಾರೆ. ಈ ಸರಣಿ ಸಾವಿನಿಂದಾಗಿ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ.
ಗ್ರಾಮಸ್ಥರು ಏನಂತಾರೆ? : ಈ ಸಾವುಗಳಿಗೆ ಗ್ರಾಮದ ದುರ್ಗಾದೇವಿಗೆ ಪೂಜೆ ಸಲ್ಲಿಸುವಾಗ ದೇವಿ ಮೂರ್ತಿಯು ವಿರೂಪಗೊಂಡಿರುವುದು ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ವಿರೂಪಗೊಂಡ ಬಳಿಕ ಗ್ರಾಮದಲ್ಲಿ ಪ್ರತಿದಿನವೂ ಒಬ್ಬೊಬ್ಬರು ನಿಧನರಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಈ ಹಿನ್ನೆಲೆ ಗ್ರಾಮಸ್ಥರು, ಶಿರಸಂಗಿ ಕಾಳಿಕಾದೇವಿ ದೇವಸ್ಥಾನದ ಅರ್ಚಕರ ಸಲಹೆಯಂತೆ ಹೋಮ ಹವನ, ಅಭಿಷೇಕ ಮಾಡುವ ಮೂಲಕ ದೇವಿಯನ್ನು ಶಾಂತ ಪಡಿಸಲು ತೀರ್ಮಾನ ಕೈಗೊಂಡಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಮಂಗಳವಾರ ದಿನ ವಾರ ಹಿಡಿದು ದೇವಿಗೆ ಉಡಿ ತುಂಬುವುದು, ಆ ದಿನ ಯಾರೂ ಯಾವುದೇ ಕೆಲಸ-ಕಾರ್ಯ ಮಾಡದೇ ಮನೆಯಲ್ಲೇ ದೇವಿಯ ಜಪ ಮಾಡಲು ನಿರ್ಧರಿಸಿದ್ದಾರೆ.
ಜಾತ್ರೆ ಆಚರಣೆಗೆ ಸಿದ್ಧತೆ: ಇನ್ನು, ಅರ್ಚಕರ ಸಲಹೆಯಂತೆ ಕಳೆದ 15 ದಿನಗಳಿಂದ ದೇವಿಯ ಗರ್ಭಗುಡಿಯನ್ನು ಗ್ರಾಮಸ್ಥರು ಮುಚ್ಚಿದ್ದಾರೆ. ಅರ್ಚಕರು ಬಂದಾಗ ಮಾತ್ರ ಗರ್ಭಗುಡಿ ತೆರೆದು ದೇವಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಇದೇ ತಿಂಗಳ 15 ರಂದು ದೇವಿಯ ಜಾತ್ರೆ ಮಾಡಲು ಗ್ರಾಮಸ್ಥರು ತೀರ್ಮಾನಿಸಿದ್ದು, ಜಾತ್ರೆ ನಿಮಿತ್ತ ಹೋಮ- ಹವನ, ಕುಂಭಮೇಳ, ದೇವಿಗೆ ಉಡಿ ತುಂಬಲಿದ್ದಾರೆ. ಅಲ್ಲದೇ ಮನೆಗೊಂದು ಕುರಿ ಮರಿಯನ್ನು ದೇವಿಗೆ ಬಲಿ ಕೊಟ್ಟು ಸಿಟ್ಟಾಗಿರುವ ದೇವಿಯನ್ನು ಶಾಂತ ಮಾಡಲು ಮುಂದಾಗಿದ್ದಾರೆ.
''ಕೊರೊನಾ ಮಹಾಮಾರಿ ಸಂದರ್ಭದಲ್ಲಿ ನಮ್ಮೂರಿನ ಯಾವೊಬ್ಬರ ಜೀವಕ್ಕೂ ತೊಂದರೆ ಆಗಿರಲಿಲ್ಲ. ಆದರೆ, ಈಗ ಒಂದೂವರೆ ತಿಂಗಳಲ್ಲಿ 30 ಜನರು ಮೃತರಾಗಿದ್ದಾರೆ. ಇದರಿಂದ ನಾವೆಲ್ಲ ಭಯಭೀತರಾಗಿದ್ದು, ಇದಕ್ಕೆಲ್ಲ ದುರ್ಗಾದೇವಿ ಮೂರ್ತಿ ವಿರೂಪವಾಗಿರುವುದೇ ಕಾರಣ ಎಂದು ತಿಳಿದು ಬಂದಿದೆ. ಹಾಗಾಗಿ, ಗ್ರಾಮಸ್ಥರೆಲ್ಲ ಒಟ್ಟಾಗಿ ಜಾತ್ರೆ ಮಾಡಿ, ದೇವಿಗೆ ಶಾಂತಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ದೇವಿ ನಮ್ಮನ್ನೆಲ್ಲ ಕಾಪಾಡಲಿ ಎಂದು ಪ್ರಾರ್ಥಿಸುತ್ತಿದ್ದೇವೆ'' ಎನ್ನುತ್ತಾರೆ ಗ್ರಾಮದ ಹಿರಿಯರಾದ ಗದಿಗೆಪ್ಪ ಪೂಜೇರ.
ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದ್ದೇನು?: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಅವರನ್ನು ಸಂಪರ್ಕಿಸಿದಾಗ, "ತುರನೂರ ಗ್ರಾಮದಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ 30 ಸಾವುಗಳು ಸಂಭವಿಸಿರುವ ಕುರಿತು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಕೂಡಲೇ ರಾಮದುರ್ಗ ತಾಲೂಕು ಆರೋಗ್ಯ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಗ್ರಾಮದಲ್ಲಿ ಆರೋಗ್ಯ ಜಾಗೃತಿ, ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚಿಸುತ್ತೇನೆ. ಅಲ್ಲದೇ ಖುದ್ದು ನಾನೇ ತುರನೂರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಗ್ರಾಮಸ್ಥರು ಧೈರ್ಯದಿಂದ ಇರಬೇಕು. ಯಾರೂ ಆತಂಕಕ್ಕೆ ಒಳಗಾಗಬಾರದು" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ವಧು ಸಿಗಲೆಂದು ಮಲೆ ಮಾದಪ್ಪನ ಬೆಟ್ಟಕ್ಕೆ ಯುವಕರ ಪಾದಯಾತ್ರೆ