ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ಹೆಚ್ಚುತ್ತಿರುವುದರಿಂದ ಗಡಿ ಭಾಗದ ಜನತೆ ಕೆಲ ಗ್ರಾಮಗಳನ್ನು ಸ್ವಯಂ ಪ್ರೇರಿತವಾಗಿ ಲಾಕ್ಡೌನ್ ಮಾಡಿಕೊಳ್ಳುತ್ತಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲೂ ಸಹಿತ ಸ್ವಯಂ ಪ್ರೇರಿತವಾಗಿ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ಆದರೆ ಇದಕ್ಕೆ ಸೊಪ್ಪು ಹಾಕದ ಜನತೆ ಬೇಕಾಬಿಟ್ಟಿಯಾಗಿ ರಸ್ತೆಯಲ್ಲಿ ಓಡಾಡುತ್ತಿದ್ದಾರೆ.
ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಅಥಣಿ, ಕಾಗವಾಡ, ಹುಕ್ಕೇರಿ, ನಿಪ್ಪಾಣಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಮಹಾಮಾರಿ ಕೊರೊನಾ ಪಾಸಿಟಿವ್ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಜನರು ಕೊರೊನಾ ವೈರಸ್‌ನಿಂದ ಸುರಕ್ಷಿತವಾಗಿರಲು ಇವತ್ತಿನಿಂದ ಮುಂದಿನ 7 ದಿನಗಳವರೆಗೆ ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ಕರೆ ನೀಡಲಾಗಿದೆ. ಸಂಪೂರ್ಣವಾಗಿ ಸ್ವಯಂ ಪ್ರೇರಿತವಾಗಿ ವ್ಯಾಪಾರಸ್ಥರು ಅಂಗಡಿ ಬಂದ್ ಮಾಡಿದರೂ ಸಹಿತ ಚಿಕ್ಕೋಡಿ ಪಟ್ಟಣದಲ್ಲಿ ಜನರು ಬೇಕಾಬಿಟ್ಟಿಯಾಗಿ ದ್ವಿಚಕ್ರ ವಾಹನಗಳ ಮೇಲೆ ಮತ್ತು ಕಾಲ್ನಡಿಗೆ ಮೂಲಕ ತಿರುಗಾಡುತ್ತಿದ್ದಾರೆ.
ನಗರದ ಹೃದಯ ಭಾಗವಾದ ಕೆಸಿ ರಸ್ತೆ ಸೇರಿದಂತೆ ಪಟ್ಡಣದ ಎಲ್ಲಾ ಅಂಗಡಿಗಳು ಸಂಪೂರ್ಣವಾಗಿ ಬಂದ್ ಆಗಿವೆ. ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ಸರ್ಕಾರದ ಆದೇಶ ಇಲ್ಲದೇ ಇರುವುದರಿಂದ ಪೊಲೀಸರು, ತಾಲೂಕಾಡಳಿತ ಯಾವುದೇ ಕ್ರಮ ಜರುಗಿಸಿಲ್ಲ.