ಬೆಳಗಾವಿ: ಹೊರ ರಾಜ್ಯದ 76, ಹೊರ ಜಿಲ್ಲೆಯ 1,569 ಸೇರಿ ಬೆಳಗಾವಿ-ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಇಂದು 48,171 ವಿದ್ಯಾರ್ಥಿಗಳು ಪಿಯುಸಿ ಇಂಗ್ಲಿಷ್ ಪರೀಕ್ಷೆ ಬರೆಯಲಿದ್ದಾರೆ.
ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ್ದಾರೆ. ನಗರದ ಸರ್ದಾರ್ ಸರ್ಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದು ಪರೀಕ್ಷೆಗೆ ಬಂದ ವಿದ್ಯಾರ್ಥಿಗಳು ಮಳೆಗೆ ಪರದಾಡಬೇಕಾಯಿತು. ಬೇಗ ಬರಬೇಕೆಂದು ಶಿಕ್ಷಕರು ಹೇಳಿದ್ದರಿಂದ ವಿದ್ಯಾರ್ಥಿಗಳು ಬೆಳಿಗ್ಗೆ 7 ಗಂಟೆಗೆ ಆಗಮಿಸಿದ್ದರು. ಕೊರೊನಾ ವೈರಸ್ ಕಾರಣ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಯಾವುದೇ ವ್ಯವಸ್ಥೆಗಳು ಮಾಡಿದ್ದು ವಿದ್ಯಾರ್ಥಿಗಳು ಗುಂಪು ಗುಂಪಾಗಿ ಸೇರಿದ್ದರು. ಇದನ್ನು ಗಮನಿಸಿದ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಯಿತು.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಹೊರ ಜಿಲ್ಲೆಗಳಲ್ಲಿ ವ್ಯಾಸಾಂಗ ಮಾಡುತ್ತಿದ್ದ 743 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 21,612 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 34 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಪರಸ್ಪರ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಪ್ರತಿ ಕೊಠಡಿಗೆ 24 ವಿದ್ಯಾರ್ಥಿಗಳನ್ನು ಸೀಮಿತಗೊಳಿಸಲಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 826 ಹೊರ ಜಿಲ್ಲೆಯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 26,559 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 45 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.
ವಿಶೇಷವೆಂದರೆ, ಜಿಲ್ಲೆಯ ಯಾವುದೇ ಪರೀಕ್ಷಾ ಕೇಂದ್ರಗಳು ಕಂಟೈನ್ಮೆಂಟ್ ಝೋನ್ನಲ್ಲಿ ಇಲ್ಲ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 47 ಹಾಗೂ ಚಿಕ್ಕೋಡಿಯ 29 ವಿದ್ಯಾರ್ಥಿಗಳು ಇ–ಪಾಸ್ ಪಡೆದುಕೊಂಡಿದ್ದಾರೆ.