ಬೆಂಗಳೂರು/ ಬೆಳಗಾವಿ: ವೀರ ಸಾವರ್ಕರ್ ಸೇರಿ ಏಳು ಮಹನೀಯರ ಭಾವಚಿತ್ರಗಳನ್ನು ಸುವರ್ಣಸೌಧದ ಅಸೆಂಬ್ಲಿ ಹಾಲ್‌ನಲ್ಲಿ ಅನಾವರಣಗೊಳಿಸಲಾಯಿತು.
ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆಗೂಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವಚಿತ್ರಗಳನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ನಾರಾಯಣಗೌಡ, ಭೈರತಿ ಬಸವರಾಜ್, ಪ್ರಭು ಚೌವ್ಹಾಣ್ ಹಾಜರಿದ್ದರು.
ಕಲಾಪ ಆರಂಭಕ್ಕೂ ಮುನ್ನ ಮಹನೀಯರ ಭಾವಚಿತ್ರಗಳನ್ನು ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಪಕ್ಷಗಳ ಶಾಸಕರು ಸಭಾಂಗಣದಲ್ಲಿ ಉಪಸ್ಥಿತರಿರಲಿಲ್ಲ. ಭಾವಚಿತ್ರ ಅನಾವರಣ ವೇಳೆ ಸಚಿವರು, ಬಿಜೆಪಿ ಶಾಸಕರು ಮಾತ್ರ ಭಾಗಿಯಾಗಿದ್ದರು.
ಸಭಾಧ್ಯಕ್ಷ ಪೀಠದ ಹಿಂಭಾಗದಲ್ಲಿ ಏಳು ಮಹನೀಯರ ಫೋಟೋಗಳನ್ನು ಅನಾವರಣಗೊಳಿಸಲಾಗಿದೆ. ಮಹಾತ್ಮ ಗಾಂಧಿ, ಬಸವಣ್ಣ, ಸುಭಾಷ್ ಚಂದ್ರ ಬೋಸ್, ಡಾ.ಬಿ.ಆರ್.ಅಂಬೇಡ್ಕರ್, ಸರ್ದಾರ್ ವಲ್ಲಭ ಭಾಯ್ ಪಟೇಲ್, ವೀರ ಸಾವರ್ಕರ್, ವಿವೇಕಾನಂದ ಫೋಟೋಗಳನ್ನು ಸುವರ್ಣಸೌಧದ ಸಭಾಂಗಣದಲ್ಲಿ ಹಾಕಲಾಗಿದೆ.
ನೆಹರೂ ಫೋಟೋವಿಲ್ಲ: ಸುವರ್ಣಸೌಧ ಸಭಾಂಗಣದಲ್ಲಿ ಜವಾಹರ ಲಾಲ್ ನೆಹರೂ ಫೋಟೋ ಹಾಕಿಲ್ಲ. ಇದು ಕಾಂಗ್ರೆಸ್ ನಾಯಕರನ್ನು ಮತ್ತಷ್ಟು ಸಿಟ್ಟಿಗೆಬ್ಬಿಸಿದೆ. ಸುವರ್ಣಸೌಧದ ಅಸೆಂಬ್ಲಿ ಹಾಲ್‌ನಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಿ, ದೇಶದ ಪ್ರಥಮ ಪ್ರಧಾನಿ ನೆಹರೂ ಭಾವಚಿತ್ರ ಹಾಕದೇ ಇರುವುದು ಕಾಂಗ್ರೆಸ್ ನಾಯಕರನ್ನು ಮತ್ತಷ್ಟು ಕೆರಳಿಸಿದೆ. ಇತ್ತ ಭಾವಚಿತ್ರಗಳ ಅನಾವರಣ ನಡೆದರೆ, ಹೊರಗಡೆ ಸುವರ್ಣಸೌಧ ವಿಐಪಿ ಗೇಟ್ ಬಳಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ: ಅಧಿವೇಶನ ಆರಂಭಕ್ಕೂ ಮುನ್ನ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ