ಬೆಳಗಾವಿ: ನರೇಂದ್ರ ಮೋದಿ ಸಂಪುಟದಲ್ಲಿ ರಾಜ್ಯದ ನಾಲ್ವರಿಗೆ ಮಂತ್ರಿ ಸ್ಥಾನ ಸಿಕ್ಕರೂ ರಾಜ್ಯಕ್ಕೇನೂ ಲಾಭವಿಲ್ಲ. ನಾಲ್ವರು ಮಂತ್ರಿ ಆಗಿರುವುದು ನಿಷ್ಪ್ರಯೋಜಕ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನಾನುಭವಿಗಳೇ ಹೆಚ್ಚಿರುವ ಸಂಪುಟದಲ್ಲಿ ಅಭಿವೃದ್ಧಿ ವೇಗ ಮತ್ತಷ್ಟು ಕುಂಠಿತಗೊಳ್ಳಲಿದೆ. ಈ ಮೊದಲು ಕೇಂದ್ರದ ಅಭಿವೃದ್ಧಿ ವೇಗ ಶೇ. 50 ರಷ್ಟು ಮಾತ್ರ ಇತ್ತು. ಇದರ ವೇಗ ಶೇ.30 ಕ್ಕೆ ಕುಸಿಯಲಿದೆ. ಇನ್ಮುಂದೆ ಪ್ಯಾಸೆಂಜರ್ ರೈಲಿನಂತೆ ನಿಧಾನವಾಗಿ ಮೋದಿ ಸರ್ಕಾರ ಓಡಲಿದೆ ಎಂದರು.
ಪ್ರಧಾನಿ ಅವರಲ್ಲೇ ಇಚ್ಛಾಶಕ್ತಿ ಕೊರತೆ:
ಪ್ರಧಾನಿ ನರೇಂದ್ರ ಮೋದಿ ಅವರಲ್ಲೇ ಇಚ್ಛಾಶಕ್ತಿ ಕೊರತೆ ಇದೆ. ಪ್ರಧಾನಿ ಮೋದಿ ಅವರೇ ಫೇಲ್ಯೂರ್ ಆಗಿದ್ದಾಗ ಇನ್ನು ಸಚಿವರಿಂದ ನಿರೀಕ್ಷೆ ಅಸಾಧ್ಯ. ರಾಜ್ಯಕ್ಕೆ ನಾಲ್ಕು ಸಚಿವ ಸ್ಥಾನ ಸಿಕ್ಕಿರುವುದು ನಿಷ್ಪ್ರಯೋಜಕ, ಇವರಿಂದ ರಾಜ್ಯಕ್ಕೆ ಏನೂ ಲಾಭವಾಗಲ್ಲ ಎಂದು ಕುಟುಕಿದರು.
ಸೈಕಲ್ ಜಾಥಾಗೆ ಚಾಲನೆ:
ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ನಿಂದ ಹಮ್ಮಿಕೊಂಡ ಸೈಕಲ್ ಜಾಥಾಗೆ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು. ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ, ಮಹಾಂತೇಶ ಕೌಜಲಗಿ ಸಾಥ್ ನೀಡಿದರು. ಬೆಳಗಾವಿಯ ಕಾಂಗ್ರೆಸ್ ಭವನದಿಂದ ಡಿಸಿ ಕಚೇರಿವರೆಗೆ ಜಾಥಾ ನಡೆಯಿತು.
ಇದನ್ನೂ ಓದಿ: ಮುಂದುವರಿದ ಗಣಿ ವಿವಾದ: ಸಂಸದೆ ಸುಮಲತಾ ಭೇಟಿ ನೀಡಿದ್ದಕ್ಕೆ ಕಿಡಿಗೇಡಿಗಳಿಂದ ಕಲ್ಲು, ಮಣ್ಣಿನಿಂದ ರಸ್ತೆ ಬಂದ್!
ಜಾಥಾಗೂ ಮುನ್ನ ಮಾತನಾಡಿದ ಸತೀಶ್ ಜಾರಕಿಹೊಳಿ, ತೈಲ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸೈಕಲ್ ಜಾಥಾ ನಡೆಸುತ್ತಿದ್ದೇವೆ. ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದಿಂದ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ. ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿವೆ. ವ್ಯಾಕ್ಸಿನ್ ವಿತರಣೆ ಪ್ರಕ್ರಿಯೆ ಕೂಡ ನಿಧಾನಗತಿಯಲ್ಲಿ ಸಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.