ಬೆಳಗಾವಿ: ಉತ್ತರ ಕರ್ನಾಟಕದ ಎಲ್ಲಾ ಶಾಸಕರು ಟೋಟಲಿ ಗೊಂದಲದಲ್ಲಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಗೊತ್ತು ಗುರಿ ಇಲ್ಲದ ಬಜೆಟ್ ಮಂಡಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.
ಗೋಕಾಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ಬಗ್ಗೆ ಬಿಜೆಪಿ ಪಕ್ಷದ ಎಷ್ಟೋ ನಾಯಕರು ಟೀಕೆ ಮಾಡುತ್ತಿದ್ದಾರೆ. ನಿರ್ದಿಷ್ಟವಾದ ಗುರಿ ಇಲ್ಲದ ಬಜೆಟ್ ಇದಾಗಿದೆ. ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯನವರ ಕೆಲವಷ್ಟು ಯೋಜನೆಗಳಿದ್ದವು. ಅವುಗಳನ್ನು ಮುಂದುವರೆಸಿಲ್ಲ ಎಂದು ಕಿಡಿಕಾರಿದರು.
ಆಲಮಟ್ಟಿ ಯೋಜನೆ ಪೂರ್ಣಗೊಳಿಸಲು 1 ಲಕ್ಷ ಕೋಟಿ ಅನುದಾನ ಬೇಕು. ಆದರೆ ಸರ್ಕಾರ ಬಜೆಟ್ನಲ್ಲಿ 5 ಸಾವಿರ ಕೋಟಿ ಅನುದಾನ ಘೋಷಣೆ ಮಾಡಿದೆ. ಇಷ್ಟೇ ಅನುದಾನ ಕೊಟ್ರೆ ಯೋಜನೆ ಪೂರ್ಣಗೊಳ್ಳಲು 20 ವರ್ಷ ಸಮಯ ಬೇಕಾಗುತ್ತದೆ ಎಂದರು.
ಬಜೆಟ್ನಲ್ಲಿ ಮೇಲ್ನೋಟಕ್ಕೆ ಅನುದಾನ ತೋರಿಸಿದ್ದಾರೆ. ಆದ್ರೆ ಯಾವುದಕ್ಕೆ ಎಷ್ಟು ಎಂಬುವುದರ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಆದ್ದರಿಂದ ಇದು ಗೊತ್ತು ಗುರಿ ಇಲ್ಲದ, ಜನರಿಗೆ ಗೊಂದಲ ಮೂಡಿಸುವ ಬಜೆಟ್ ಎಂದು ಲೇವಡಿ ಮಾಡಿದರು.