ಬೆಳಗಾವಿ: ಪೀರನವಾಡಿ ರಾಯಣ್ಣ ಪ್ರತಿಮೆ ಪ್ರಕರಣ ಸುಖಾಂತ್ಯ ಕಂಡಿದ್ದು, ಮುಂದೆ ಆಗುವ ಅನಾಹುತ ತಪ್ಪಿದೆ. ಇದೊಂದು ಒಳ್ಳೆಯ ಬೆಳವಣಿಗೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ಪ್ರಕರಣ ಬಗೆಹರಿಸಲು ಸಂಧಾನ ಒಂದೇ ದಾರಿ ಎಂದು ಮುಂಚೆಯಿಂದ ನಾವು ಹೇಳಿದ್ದೇವೆ. ಸಮಸ್ಯೆಗೆ ಪರಿಹಾರ ಕಂಡಿದ್ದು, ಸಂತೋಷ ತಂದಿದೆ ಎಂದರು.
ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರ ಸರ್ಕಾರಕ್ಕೆ ಬರೆಯುವ ಪತ್ರಕ್ಕೆ ಮಹತ್ವ ಕೊಡುವ ಅಗತ್ಯತೆ ಇಲ್ಲ. ಯಾವುದೇ ಸಮುದಾಯ, ಭಾಷೆಯವರಿದ್ದರೂ ಅವರು ಕನ್ನಡಿಗರೇ ಎಂಬ ಭಾವನೆ ಮುಂಚೆಯಿಂದಲೂ ಇದೆ. ಹೀಗಾಗಿ ಬೇರೆಯವರಿಂದ ಪಾಠ ಕಲಿಯುವ ಅವಶ್ಯಕತೆ ನಮಗಿಲ್ಲ. ನಾವೆಲ್ಲರೂ ಒಂದೇ. ಹೀಗಾಗಿ ಪತ್ರ ಬರೆಯುವ ಅವಶ್ಯಕತೆಯೂ ಇಲ್ಲ. ಆ ಪತ್ರಗಳಿಗೆ ಮಹತ್ವ ನೀಡಬೇಕಿಲ್ಲ ಎಂದರು.
ಕನ್ನಡ ಚಿತ್ರರಂಗದಲ್ಲಿ ಕೇಳಿ ಬಂದ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಪ್ರತಿಕ್ರಿಯಿಸಿ, ಡ್ರಗ್ಸ್ ಜಾಲದ ಕುರಿತು ವ್ಯಾಪಕ ಆರೋಪ ಕೇಳಿ ಬಂದಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ಸತ್ಯಾಂಶ ಬಯಲಿಗೆಳೆಯಬೇಕು ಎಂದರು.