ಬೆಳಗಾವಿ: ನಾಳೆ ಪಂಚಮಸಾಲಿ ಸಮಾಜದವರು ಬೃಹತ್ ಪ್ರತಿಭಟನೆ ನಡೆಸಲಿದ್ದು, ಸರ್ಕಾರದಿಂದ ಪ್ರತಿಭಟನಾಕಾರರಿಗೆ ಯಾವುದೇ ತೊಂದರೆ ಆಗದಂತೆ ಭದ್ರತೆ ನೀಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಳಗಾವಿ ನಗರ ಬಸ್ತವಾಡ ಗ್ರಾಮದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜದವರು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಅದರೊಂದಿಗೆ ಎಲ್ಲರೂ ಮೀಸಲಾತಿ ಕೇಳುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಚೀನಾ ಭಾರತದ ಗಡಿಗೆ ನುಗ್ಗಿದಂತೆ ಕರ್ನಾಟಕದೊಳಗೆ ನಾವು ನುಗ್ಗುತ್ತೇವೆ ಎಂದು ಮಹಾರಾಷ್ಟ್ರದ ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಚೀನಾ -ಭಾರತ ಹಾಗೂ ಮಹಾರಾಷ್ಟ್ರ- ಕರ್ನಾಟಕ ಗಡಿ ಬಗ್ಗೆ ವ್ಯತ್ಯಾಸ ಗೊತ್ತಿಲ್ಲದೆ ಅವರು ಬಾಲಿಷ ಹೇಳಿಕೆ ನೀಡಿದ್ದಾರೆ. ಸಂಜಯ್ ರಾವತ್ ಅವರದ್ದು ಬೇಜವಾಬ್ದಾರಿ ಹೇಳಿಕೆಯಾಗಿದೆ. ರಾಜಕಾರಣ ಲಾಭಕ್ಕಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಚೀನಾ ನುಗ್ಗಿದಂತೆ ಕರ್ನಾಟಕದೊಳಕ್ಕೆ ನುಗ್ಗುತ್ತೇವೆ: ಕಿಡಿ ಹೊತ್ತಿಸಿದ ಸಂಜಯ್ ರಾವುತ್!
ಕೇಂದ್ರ ಗೃಹ ಸಚಿವರು ಎರಡೂ ರಾಜ್ಯದ ಸಚಿವರು ಹಾಗೂ ಸಿಎಂ ಅವರನ್ನು ಕರೆದು ಗಡಿ ವಿಚಾರವಾಗಿ ಸಭೆ ಮಾಡಿದ್ದಾರೆ. ಪ್ರಕರಣವು ನ್ಯಾಯಾಲಯದಲ್ಲಿದೆ. ಅನಾವಶ್ಯಕವಾಗಿ ಜನರ ಭಾವನೆ ಕೆರಳಿಸಬಾರದು. ನೆಮ್ಮದಿ ಹಾಳು ಮಾಡಬಾರದು. ವಿರೋಧ ಪಕ್ಷದವರು ಭಾವನಾತ್ಮಕವಾಗಿ ಮಾತನಾಡಬಾರದು ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.