ಚಿಕ್ಕೋಡಿ : ಜಿಲ್ಲೆ ರಚನೆಗಾಗಿ ಈ ಭಾಗದ ಜನತೆಗೆ ಲೋಕಸಭಾ ಚುನಾವಣೆಯಲ್ಲಿ ಮಾತು ನೀಡಿದ್ದ ಸಂಸದ ಅಣ್ಣಾಸಾಹೇಬ ಜೊಲ್ಲೆ, ಅಗಸ್ಟ್ 15ರೊಳಗಾಗಿ ಜಿಲ್ಲೆ ರಚನೆ ಮಾಡಿ, ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಚಿಕ್ಕೋಡಿ ಜಿಲ್ಲಾ ರಚನೆ ಹೋರಾಟದ ಮುಖಂಡ ಬಿ ಆರ್ ಸಂಗಪ್ಪಗೋಳ ಎಚ್ಚರಿಕೆ ನೀಡಿದ್ದಾರೆ .
ಚಿಕ್ಕೋಡಿ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ದೊಡ್ಡ ಜಿಲ್ಲೆಯಾದ ಬೆಳಗಾವಿಯನ್ನು ಎರಡು ಜಿಲ್ಲೆಗಳನ್ನಾಗಿ ಮಾಡಿ, ಆಡಳಿತ ದೃಷ್ಟಿಯಿಂದ ಚಿಕ್ಕೋಡಿಯನ್ನು ಜಿಲ್ಲೆ ಮಾಡಬೇಕೆಂಬುದು ಈ ಭಾಗದ ಜನತೆ ಕೂಗಾಗಿದೆ. ಚುನಾವಣೆಯಲ್ಲಿ ಮಾತು ಕೊಟ್ಟಂತೆ ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಚಿಕ್ಕೋಡಿ ಜಿಲ್ಲಾ ರಚನೆಗೆ ಒತ್ತಡ ಹಾಕಿ, ಬರುವ ಅಗಸ್ಟ್ 15 ರಂದು ಚಿಕ್ಕೋಡಿಯನ್ನು ಜಿಲ್ಲೆ ಎಂದು ಘೋಷಣೆ ಮಾಡಬೇಕು ಎಂದರು.
ಕಾವೇರಿ ನದಿಗೆ ಹೇಗೆ ಪ್ರಾಮುಖ್ಯತೆ ನೀಡಲಾಗುತ್ತದೆಯೋ ಅದೇ ರೀತಿ ಕೃಷ್ಣಾ ನದಿಗೆ ಪ್ರಾಮುಖ್ಯತೆ ನೀಡಬೇಕು. ನೀರಾವರಿ ಯೋಜನೆಗಳನ್ನು ಕಲ್ಪಿಸಿದ್ದಲ್ಲಿ ಯಡಿಯೂರಪ್ಪ ಅವರ ಹೆಸರು ಉತ್ತರ ಕರ್ನಾಟಕ ಭಾಗದಲ್ಲಿ ಉಳಿಯುತ್ತದೆ ಎಂದು ಬಿ ಆರ್ ಸಂಗಪ್ಪಗೋಳ ಹೇಳಿದರು.