ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆಗೆ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು.
ಬೆಳಗಾವಿಯಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ ಮಹಾನ್ ನಾಯಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಪೀರನವಾಡಿ ಮುಖ್ಯ ಸರ್ಕಲ್ನಲ್ಲಿಯೇ ಪ್ರತಿಷ್ಠಾಪನೆ ಮಾಡುವುದು ರಾಜ್ಯದ ರಾಯಣ್ಣನ ಅಭಿಮಾನಿಗಳು ಒತ್ತಾಸೆಯಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ಮೂಲಕ ತ್ವರಿತವಾಗಿ ಈ ಬಿಕ್ಕಟನ್ನು ಬಗೆಹರಿಸಬೇಕು ಎಂದು ಬೆಳಗಾವಿಯಲ್ಲಿ ರಾಯಣ್ಣನ ಅಭಿಮಾನಿಗಳು ಮನವಿ ಮಾಡಿಕೊಂಡರು.
ಸರ್ಕಾರ ಮತ್ತು ಜಿಲ್ಲಾಡಳಿತ ಈವರೆಗೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸ್ಪಂದಿಸುತ್ತಿಲ್ಲ. ಕ್ರಾಂತಿ ಪುರುಷನಿಗೆ ಗೌರವಯುತವಾಗಿ ನಡೆದುಕೊಳ್ಳಬೇಕಾದ ಜಿಲ್ಲಾಡಳಿತ ಮತ್ತು ಸರ್ಕಾರ ಮೌನ ವಹಿಸಿರುವುದು ಕನ್ನಡಪರ ಹೋರಾಟಗಾರರಿಗೆ ನೋವುಂಟು ಮಾಡಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಭೆ ಕರೆದು ಮೂರ್ತಿ ಪ್ರತಿಷ್ಠಾಪನೆ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.