ಚಿಕ್ಕೋಡಿ : ದಿನದಿಂದ ದಿನಕ್ಕೆ ಬಿಸಿಲಿನ ಬೇಗೆ ಹೆಚ್ಚುತ್ತಿರುವ ಪರಿಣಾಮ ಮಡ್ಡಿ ಭಾಗದಲ್ಲಿ ಮೇವು ಹಾಗೂ ನೀರಿನ ಅಭಾವ ಸೃಷ್ಟಿಯಾದ ಪರಿಣಾಮ ಜಾನುವಾರುಗಳನ್ನು ಮಾರಾಟ ಮಾಡಲು ರೈತರು ಮುಂದಾಗಿದ್ದಾರೆ.
ನೀರು ಮತ್ತು ಮೇವಿನ ಕೊರತೆಯಿಂದ ಬಹುತೇಕ ಮಳೆಯಾಶ್ರಿತ ಪ್ರದೇಶದ ಜಾನುವಾರುಗಳು ಸಂಕಷ್ಟ ಎದುರಿಸುತ್ತಿವೆ. ಹಾಗಾಗಿ, ಜಾನುವಾರು ಮಾರುಕಟ್ಟೆಗಳಲ್ಲಿ ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ.
ಗಡಿ ಭಾಗದ ಪ್ರತಿ ಗ್ರಾಮದಲ್ಲಿ ಒಕ್ಕಲುತನದ ಜತೆಗೆ ಹೈನುಗಾರಿಕೆಯೂ ನಡೆಯುತ್ತಿದೆ. ಈ ಬಾರಿ ನದಿ ತೀರದ ಪ್ರದೇಶ ಹೊರತುಪಡಿಸಿ ಉಳಿದೆಡೆ ಮೇವಿನ ಕೊರತೆಯಾಗಿ ರೈತರ ಜತೆಗೆ ಜಾನುವಾರುಗಳು ಸಹ ಸಂಕಷ್ಟ ಎದುರಿಸುವ ಪ್ರಸಂಗ ಎದುರಾಗಿದೆ.
ಚಿಕ್ಕೋಡಿ-ನಿಪ್ಪಾಣಿ ತಾಲೂಕಿನಲ್ಲಿ ಪಂಚನದಿಗಳ ಕೃಪಾಕಟಾಕ್ಷವಿರುವುದರಿಂದ ಬಹುತೇಕ ರೈತರು ಕಬ್ಬು, ಸೋಯಾ, ಹಣ್ಣು-ಹಂಪಲು, ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ.
ತಾಲೂಕಿನ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಮಾತ್ರ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. ನದಿ ತೀರದ ಗ್ರಾಮಗಳು ಮತ್ತು ನೀರಾವರಿ ಸೌಲಭ್ಯವಿದ್ದ ರೈತರು ಸಹ ದನಗಳಿಗೆ ಮೇವು ಬೆಳೆದುಕೊಳ್ಳದೇ ಇರುವುದರಿಂದ ಮೇವಿಗಾಗಿ ಪರದಾಡಿ ಸಂಗ್ರಹಿಸುವ ಪರಿಸ್ಥಿತಿ ಇದೆ.
ಮಡ್ಡಿ ಭಾಗದ ಜನರ ಜಮೀನಿನಲ್ಲಿ ಮೇವಿನ ಜೊತೆಗೆ ನೀರು ಕಡಿಮೆಯಾಗಿದೆ. ಜಾನುವಾರುಗಳನ್ನು ಮಾರುಕಟ್ಟೆಗೆ ತಂದು ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾತಿವಂತ ಥಳಿಯ ಎಮ್ಮೆಗಳನ್ನು 90,000 ರೂ. ಗೆ ಮಾರಾಟ ಮಾಡಲು ರೈತರು ಮುಂದಾಗಿದ್ದಾರೆ. ಇನ್ನೂ ಕೆಲವರು ಸಾದಾ ಎಮ್ಮೆಗಳನ್ನು 60,000 ರೂ.ಗೆ ಮಾರಾಟ ಮಾಡುತ್ತಿದ್ದಾರೆ.
ಮೇವಿನ ಮತ್ತು ನೀರಿನ ವ್ಯವಸ್ಥೆ ಇದ್ದವರು ಮಾತ್ರ ಎಮ್ಮೆಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಖರೀದಿ ಮಾಡುವವರು ಸಹ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಕೆಲ ರೈತರು ಮಾರಾಟ ಮಾಡುತ್ತಿದ್ದರೆ, ಇನ್ನೂ ಕೆಲವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗೆ ಮರಳುತ್ತಿದ್ದಾರೆ.
ಇದನ್ನೂ ಓದಿ: ವನ್ಯಜೀವಿ ವೈದ್ಯಾಧಿಕಾರಿ ಮೇಲೆ ಆನೆ ದಾಳಿ: ಸೊಂಡಿಲಿನಿಂದ ನೆಲಕ್ಕೆ ಹಾಕಿ ತುಳಿಯಲು ಯತ್ನಿಸಿದ 'ನೀಲಾಂಬರಿ'
ಹಾಗಾಗಿ, ಈ ಬಾರಿ ಆದಷ್ಟು ಬೇಗ ಮೇವಿನ ವ್ಯವಸ್ಥೆ ಮಾಡಿಕೊಡಿ ಎಂದು ಸರ್ಕಾರಕ್ಕೆ ಮಡ್ಡಿ ಭಾಗದ ರೈತರು ಆಗ್ರಹಿಸಿದ್ದಾರೆ.