ಬೆಳಗಾವಿ: ರಾಜ್ಯ ಸರ್ಕಾರ ಇಲ್ಲಿರುವ ಮರಾಠಾ ಸಮುದಾಯಕ್ಕೆ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಆದ್ರೆ, ಮಹಾರಾಷ್ಟ್ರ ಸರ್ಕಾರ ಅಲ್ಲಿರುವ ಕನ್ನಡಿಗರಿಗೆ ಏನಾದರೂ ಅನುಕೂಲ ಮಾಡಿಕೊಟ್ಟಿದ್ದಾರೆಯೇ ಎಂದು ಸಾ.ರಾ ಗೋವಿಂದ್ ಪ್ರಶ್ನಿಸಿದ್ದಾರೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲ್ಲಾಪುರ, ಸೊಲ್ಲಾಪುರ, ಮುಂಬೈನಲ್ಲಿರುವ ಕನ್ನಡಿಗರಿಗೆ ಅಲ್ಲಿನ ಸರ್ಕಾರ ಏನು ಅನುಕೂಲ ಮಾಡಿಕೊಟ್ಟಿದೆ. ಮರಾಠಾ ಭಾಷಿಕರ ವಿರುದ್ಧ ನಮ್ಮ ಹೋರಾಟವಲ್ಲ. ಮರಾಠಾ ಅಭಿವೃದ್ಧಿ ನಿಗಮ ಕೈಬಿಡಬೇಕು ಎಂಬುವುದು ನಮ್ಮ ಆಗ್ರಹ ಎಂದರು.
ಮರಾಠಾ ನಿಗಮಕ್ಕೆ ನೀವು ಇಟ್ಟಿರುವ ₹50 ಕೋಟಿ ಅನುದಾನದಲ್ಲಿ ಏನೂ ಬರಲ್ಲ. ಅದರ ಬದಲು ಬೇರೆ ಬೇರೆ ಅವಕಾಶಗಳು ಇವೆ. ಶಿಕ್ಷಣ ಕ್ಷೇತ್ರದಲ್ಲಿ, ಉದ್ಯೋಗ ಕ್ಷೇತ್ರದಲ್ಲಿ ಅವರಿಗೆ ರಿಯಾಯಿತಿ ಕೊಡಿ. ಮರಾಠಾ ಸಮುದಾಯಕ್ಕೆ ಒಂದು ಸಾವಿರ ಕೋಟಿ ಕೊಡಿ ನಮ್ಮ ಅಭ್ಯಂತರವಿಲ್ಲ.
ಆದ್ರೆ, ಮರಾಠಾ ಅಭಿವೃದ್ಧಿ ನಿಗಮ ಮಾಡಬೇಡಿ. ನಾಳೆ ತಮಿಳರು, ಮಳಿಯಾಳಿಗರು, ಮಾರ್ವಾಡಿಗರು ಕೇಳ್ತಾರೆ. ಹೀಗೆ ನೀವು ಪ್ರಾಧಿಕಾರ ರಚನೆ ಮಾಡಿಕೊಂಡು ಹೋಗ್ತೀರಾ ಎಂದು ಸಾ.ರಾ ಗೋವಿಂದ್ ಪ್ರಶ್ನಿಸಿದರು.
ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ ಮಾತನಾಡಿ, ಹೀಗೆ ಬಿಟ್ಟರೆ ಇವರು ಸುವರ್ಣಸೌಧವನ್ನು ಶ್ರೀಮಂತ ಮರಾಠರಿಗೆ ಮಾರಾಟ ಮಾಡುತ್ತಾರೆ. ಸುವರ್ಣಸೌಧದ ಸುತ್ತ ನಿಷೇಧಾಜ್ಞೆ ಜಾರಿ ಮಾಡಲು ನಿಮಗೇನು ನೈತಿಕತೆ ಇದೆ. ಕರಾಳ ದಿನಾಚರಣೆ ಮಾಡುವ ಎಂಇಎಸ್‌ನವರನ್ನ ಗಡಿಪಾರು ಮಾಡಲಿಲ್ಲ.
ಶಿವಸೇನೆಯವರು ಯಾವಾಗ ಬೇಕಾದರೂ ಬೆಳಗಾವಿಗೆ ಬರಬಹುದು. ಕನ್ನಡ ಮುಖಂಡರು ಬಂದ್ರೇ ಹಿರೇಬಾಗೇವಾಡಿ ಬಳಿ ತಡೆಯುತ್ತೀರಿ. ನಿಮ್ಮ ಸರ್ಕಾರ ಮರಾಠಿಗರ, ಶಿವಸೇನೆ ಏಜೆಂಟ್ ಸರ್ಕಾರನಾ? ಎಂದರು.
ನಮ್ಮ ರಾಜ್ಯವನ್ನು ಸಿಎಂ ಯಡಿಯೂರಪ್ಪ ಹರಾಜಿಗೆ ಇಟ್ಟಿದ್ದಾರೆ. ಕನ್ನಡಿಗರ ಮೇಲೆ ದಾಳಿ ನಡೆಯುತ್ತಿದೆ. ರಾಯಚೂರು, ಬೀದರ್, ಕಲಬುರಗಿ ಕನ್ನಡಿಗರ ಕೈಯಲ್ಲಿಲ್ಲ. ಮರಾಠ ಅಭಿವೃದ್ಧಿ ಮಾಡಲು ನಿಮಗೇನು ಅಧಿಕಾರ ಇದೆ.
ಒಂದು ನಿಮಿಷವೂ ನೀವು ಅಧಿಕಾರದಲ್ಲಿರಲು ಲಾಯಕ್ಕಿಲ್ಲ. ಮರಾಠಾ ಪ್ರಾಧಿಕಾರ ಮಾಡಿರುವುದು ಅಕ್ಷಮ್ಯ ಅಪರಾಧ. ಯಡಿಯೂರಪ್ಪ ನೀವೇ ಸಿಎಂ ಆಗಿ ಉಳಿದರೆ, ಬೆಳಗಾವಿಯನ್ನೇ ಯಾವುದೋ ರೂಪದಲ್ಲಿ ಮಹಾರಾಷ್ಟ್ರಕ್ಕೆ ಕೊಡ್ತೀರಿ. ಸಿಎಂ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.