ಬೆಳಗಾವಿ : ಇಲ್ಲಿನ ಗಾಂಧಿ ನಗರದ ಬೈಪಾಸ್‍ನಲ್ಲಿ ವ್ಯಕ್ತಿಯೋರ್ವನ ಮೇಲೆ ಹಲ್ಲೆ ಮಾಡಿ ಆತನ ಬಳಿಯಿದ್ದ ಹಣ, ಎಟಿಎಂ ಕಾರ್ಡ್ ಮತ್ತು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನ್ಯೂ ಗಾಂಧಿ ನಗರದ ಆದಿಲ್ ಶಾ ಗಲ್ಲಿಯ ಪರವೇಜ್ ಜಮೀರ್ ಪಾರಿಶವಾಡಿ (20) ಹಾಗೂ ಜುಬೇರ್ ಅಬ್ದುಲ್ ರಶೀದ್ ದಾಲಾಯತ್ (20) ಬಂಧಿತ ಆರೋಪಿಗಳು. ಇವರು ಚಿಕ್ಕೋಡಿ ತಾಲೂಕಿನ ಪಟ್ಟಣಕೋಡಿ ಗ್ರಾಮದ ತಮ್ಮಣ್ಣ ಮಲ್ಲಗೌಡ ಸೋಮಣ್ಣವರ ಎಂಬವರ ಮೇಲೆ ಹಲ್ಲೆ ಮಾಡಿ, ಅವರ ಬಳಿಯಿದ್ದ ಹಣ, ಮೊಬೈಲ್ ಮತ್ತು ಎಟಿಎಂ ಕಾರ್ಡ್ ಕಿತ್ತಕೊಂಡು ಪರಾರಿಯಾಗಿದ್ದರು. ಬಳಿಕ ಎಟಿಎಂನಿಂದ 20 ಸಾವಿರ ರೂಪಾಯಿ ಹಣ ಡ್ರಾ ಮಾಡಿಕೊಂಡಿದ್ದರು.
ಓದಿ : 8 ವರ್ಷ 11 ಆಸ್ಪತ್ರೆಗಳಲ್ಲಿ ನಕಲಿ ವೈದ್ಯನಾಗಿ ಕೆಲಸ.. ಬೆಂಗಳೂರಲ್ಲೂ ಇದೆ ಖದೀಮನ ವಂಚನೆ ಜಾಲ!
ಈ ಕುರಿತು ಹಲ್ಲೆಗೊಳಗಾದ ವ್ಯಕ್ತಿ ತಮ್ಮಣ್ಣ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 18,500 ರೂ. ನಗದು, ಒಂದು ಎಟಿಎಂ ಕಾರ್ಡ್, ಒಂದು ಸೋನಾಟಾ ಕಂಪನಿಯ ಕೈಗಡಿಯಾರ, ಒಂದು ಸ್ಯಾಮಸಂಗ್ ಕಂಪನಿಯ ಕಿಪ್ಯಾಡ್ ಮೊಬೈಲ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಡಿಸಿಪಿ ಡಾ. ವಿಕ್ರಮ್ ಆಮಟೆ, ಮಾರ್ಕೆಟ್ ಠಾಣೆ ಉಪ ವಿಭಾಗದ ಎಸಿಪಿ ನಾರಾಯಣ ಭರಮನಿ ಮಾರ್ಗದರ್ಶನದಲ್ಲಿ ಮಾಳ ಮಾರುತಿ ಠಾಣೆ ಸಿಪಿಐ ಸುನೀಲ್ ಪಾಟೀಲ್, ಪಿಎಸ್ಐ ಹೊನ್ನಪ್ಪ ತಳವಾರ ನೇತೃತ್ವದ ಸಿಬ್ಬಂದಿ ತಂಡ ಭಾಗಿಯಾಗಿತ್ತು. ಮಾಳಮಾರುತಿ ಠಾಣೆ ಪೊಲೀಸರ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.