ಬೆಳಗಾವಿ: ಇಬ್ಬರು ಮುಸುಕುಧಾರಿಗಳು ಪಿಸ್ತೂಲ್ ತೋರಿಸಿ ಬಂಗಾರದ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಬೆಳಗಾವಿಯ ಶಾಹುನಗರದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಪ್ರಶಾಂತ ಹೊನರಾವ್ ಎಂಬವರಿಗೆ ಸೇರಿದ ಸಂತೋಷಿ ಜ್ಯುವೆಲ್ಲರಿಯಲ್ಲಿ ಘಟನೆ ನಡೆದಿದೆ. ಎಂದಿನಂತೆ ಬಾಗಿಲು ತೆರೆದು ಪ್ರಶಾಂತ ಅಂಗಡಿಯಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಅಂಗಡಿಗೆ ನುಗ್ಗಿದ್ದಾರೆ. ಒಬ್ಬ ಪಿಸ್ತೂಲಿನಿಂದ ಹೆದರಿಸಿ, ಚಿನ್ನಾಭರಣ ನೀಡುವಂತೆ ಒತ್ತಾಯಿಸಿದ್ದಾನೆ. ಪ್ರಶಾಂತ ಪ್ರತಿರೋಧ ತೋರುತ್ತಿದ್ದಂತೆ ದರೋಡೆಕೋರರು ಹಲ್ಲೆಗೆ ಮುಂದಾಗಿದ್ದಾರೆ. ಇದಕ್ಕೆ ಪ್ರಶಾಂತ ತೀವ್ರ ಪ್ರತಿರೋಧ ಒಡ್ಡಿದ್ದು ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಗಾಯಗೊಂಡ ಪ್ರಶಾಂತ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ಡಿಸಿಪಿ ರೋಹನ ಜಗದೀಶ, ಡಿಸಿಪಿ ಪಿ.ವಿ.ಸ್ನೇಹಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನ್ಯಾಯ ವಿಜ್ಞಾನ ಪ್ರಯೋಗಾಲಯ, ಶ್ವಾನ ದಳದ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕೈಗೊಂಡರು.
ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಮಾತನಾಡಿ, "ಇಬ್ಬರು ಅಪರಿಚಿತರು ಜ್ಯುವೆಲ್ಲರಿ ಶಾಪ್ಗೆ ಬಂದು ದಾಳಿ ಮಾಡಿದ್ದಾರೆ. ಮಾಲೀಕ ಕೂಡ ಪ್ರತಿರೋಧ ತೋರಿದ್ದಾರೆ. ಪಿಸ್ತೂಲಿನಿಂದ ಯಾವುದೇ ಗುಂಡು ಹಾರಿಲ್ಲ. ದರೋಡೆ ಯತ್ನ ಪ್ರಕರಣ ದಾಖಲಿಸಿಕೊಂಡು, ಎಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ತನಿಖೆ ಶುರು ಮಾಡಿದ್ದೇವೆ. ಸಿಸಿಟಿವಿಯಲ್ಲೂ ದೃಶ್ಯ ಸೆರೆಯಾಗಿದೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಿ, ಬಂಧಿಸುತ್ತೇವೆ" ಎಂದರು.
ಅಂಗಡಿ ಮಾಲೀಕ ಪ್ರಶಾಂತ ಸಹೋದರ ಸಂತೋಷ ಮಾತನಾಡಿ, "ನಮ್ಮ ಸಹೋದರ ಅಂಗಡಿಯಲ್ಲಿದ್ದಾಗ ಮುಸುಕುಧಾರಿಗಳಿಂದ ಕಳ್ಳತನಕ್ಕೆ ಯತ್ನ ನಡೆದಿದೆ. ನಮ್ಮ ಸಹೋದರ ವಿರೋಧ ವ್ಯಕ್ತಪಡಿಸುತ್ತಿದ್ದಂತೆ, ಅವರು ಪರಾರಿಯಾಗಿದ್ದಾರೆ. ಅಂಗಡಿಯಲ್ಲಿ ಏನೂ ಕಳ್ಳತನ ಆಗಿಲ್ಲ" ಎಂದು ತಿಳಿಸಿದರು. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಲಬುರಗಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ಕುಖ್ಯಾತ ಸರಗಳ್ಳರ ಬಂಧನ