ಬೆಳಗಾವಿ: ಎರಡು ಮನೆಗಳಲ್ಲಿ ತಡಕಾಡಿದರೂ ಏನೂ ಸಿಗಲಿಲ್ಲ ಅಂತ ಮೂರನೇ ಮನೆ ಕಳ್ಳತನ ಮಾಡಿರುವ ಖದೀಮರು ಬಳಿಕ ಆ ಮನೆಗೆ ಬೆಂಕಿ ಇಟ್ಟು ಪರಾರಿಯಾಗಿರುವ ಘಟನೆ ಬೈಲಹೊಂಗಲ ಪಟ್ಟಣದ ಪತ್ರಿ ಬಸವ ನಗರದಲ್ಲಿ ನಡೆದಿದೆ.
ಕಳ್ಳತನ ಮಾಡಿ ಮನೆಗೆ ಬೆಂಕಿ ಹಚ್ಚಿ ಖದೀಮರು ಪರಾರಿಯಾಗಿದ್ದು, ಬೆಂಕಿಯಲ್ಲಿ ಮನೆ ಸುಟ್ಟು ಭಸ್ಮವಾಗಿದೆ. ಇದು ಬಸಪ್ಪ ಎಂಬುವವರಿಗೆ ಸೇರಿದ ಮನೆಯಾಗಿದ್ದು, ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮನೆಯಲ್ಲಿದ್ದ ಟಿವಿ, ಪೀಠೋಪಕರಣ, ಅಡುಗೆ ವಸ್ತುಗಳು, ಬಟ್ಟೆಗಳೆಲ್ಲವೂ ಬೆಂಕಿಗೆ ಆಹುತಿಯಾಗಿವೆ. ಅದೇ ನಗರದ ಮೊದಲೆರಡು ಮನೆಗಳ ಬೀಗ ಮುರಿದು ಒಳಗೆ ನುಗ್ಗಿದ್ದ ಕಳ್ಳರು ಚಿನ್ನಾಭರಣ, ಹಣಕ್ಕಾಗಿ ತಡಕಾಡಿದ್ದಾರೆ. ಎರಡೂ ಮನೆಯಲ್ಲಿ ಏನೂ ಸಿಗದ ಕಾರಣ ಕಳ್ಳರು ಮೂರನೇ ಮನೆಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಇನ್ನು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.