ಚಿಕ್ಕೋಡಿ: ಕೊಯ್ನಾ ಡ್ಯಾಂ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಮಹಾರಾಷ್ಟ್ರದ ಜಲಾಶಯಗಳಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿಯ ಕೃಷ್ಣಾ ನದಿಗೆ 1,78,208 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಕೊಯ್ನಾ ಜಲಾಶಯದಿಂದ 70,404 ಕ್ಯೂಸೆಕ್, ವಾರಣಾ ಜಲಾಶಯದಿಂದ 13,150 ಕ್ಯೂಸೆಕ್, ರಾಧಾನಗರಿ ಜಲಾಶಯದಿಂದ 11,396 ಕ್ಯೂಸೆಕ್, ದೂಮ್ ಜಲಾಶಯದಿಂದ 3,888 ಕ್ಯೂಸೆಕ್, ಕನೇರ್ ಜಲಾಶಯದಿಂದ 3,998 ಕ್ಯೂಸೆಕ್ ಸೇರಿದಂತೆ ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 1,50,400 ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದೆ.
ಕೃಷ್ಣಾ ನದಿಯ ಉಪ ನದಿಗಳಾದ ಪಂಚಗಂಗಾ, ದೂಧಗಂಗಾ, ವೇದಗಂಗಾ ನದಿಗಳಲ್ಲೂ ಕೂಡಾ ನೀರಿನ ಹರಿವು ಹೆಚ್ಚಳವಾಗಿದೆ. ನದಿ ತೀರದ ಪ್ರದೇಶಗಳಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಯ ನದಿ ತೀರದ ಜನರಲ್ಲಿ ಮತ್ತೊಮ್ಮೆ ಪ್ರವಾಹದ ಭೀತಿ ಪ್ರಾರಂಭವಾಗಿದೆ. ತಾಲೂಕು ಆಡಳಿತ ಸಂಭವನೀಯ ನೆರೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಂಡಿದೆ ಹಾಗೂ ಎನ್‌ಡಿಆರ್‌ಎಫ್ ತಂಡವನ್ನೂ ಕರೆಸಿಕೊಳ್ಳಲಾಗಿದೆ.