ಬೆಳಗಾವಿ/ ಬೆಂಗಳೂರು : 2025ರ ವೇಳೆಗೆ ರಾಜ್ಯದ ಶೇ.80 ರಷ್ಟು ಪೊಲೀಸ್ ಸಿಬ್ಬಂದಿಗೆ ವಸತಿ ಗೃಹ ಕಲ್ಪಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು. ವಿಧಾನಸಭೆಯ ಪ್ರಶೋತ್ನರ ಕಲಾಪದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಗೃಹ ಸಚಿವನಾಗಿದ್ದ ವೇಳೆ 2020ರಲ್ಲಿ ರಾಜ್ಯದಲ್ಲಿ 10 ರಿಂದ 15 ಸಾವಿರ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದೆ. ನಂತರ ಬಂದ ಸರ್ಕಾರವು ಯೋಜನೆಯನ್ನು ಮುಂದುವರಿಸಿದೆ. ಗ್ರಾಮೀಣ ಹಾಗೂ ಅವಶ್ಯಕತೆ ಇರುವ ಕಡೆ ವಸತಿ ಗೃಹಗಳನ್ನು ನಿರ್ಮಿಸಲಾಗುವುದು. ಈಗಾಗಲೇ ಶೇ.40 ರಷ್ಟು ಸಿಬ್ಬಂದಿಗೆ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಹೊನ್ನಾಳಿ ತಾಲೂಕು ನ್ಯಾಮತಿಯಲ್ಲಿ 12 ಹೊಸ ವಸತಿ ಗೃಹಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪೊಲೀಸ್ ಠಾಣೆಗೆ 2.26 ಎಕರೆ ಜಮೀನು ನೀಡಿದ್ದ ದಿವಂಗತ ಹೆಚ್.ಬಸವರಾಜಪ್ಪ ಅವರ ಪತ್ನಿ ಹಾಗೂ ಮಕ್ಕಳು ರೂ.45 ಲಕ್ಷ ಹೆಚ್ಚಿನ ಪರಿಹಾರ ಕೋರಿ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈಗಾಗಲೇ ಅವರಿಗೆ ರೂ.53.92 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ನ್ಯಾಯಾಲಯದ ಆದೇಶ ಬಂದ ಕೂಡಲೇ ವಸತಿ ಗೃಹಗಳ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ತಿಳಿಸಿದರು.
ಆಯವ್ಯಯದಲ್ಲಿ ಹೊಸ ಅಗ್ನಿಶಾಮಕ ಠಾಣೆಗೆ ಪ್ರಸ್ತಾವನೆ : ರಾಜ್ಯದ ಹಲವು ತಾಲೂಕು ಕೇಂದ್ರಗಳಲ್ಲಿ ಹೊಸ ಅಗ್ನಿಶಾಮಕ ಠಾಣೆ ನಿರ್ಮಿಸಲು ಶಾಸಕರ ಕಡೆಯಿಂದ ಮನವಿಗಳು ಬಂದಿವೆ. ಈ ಮನವಿಗಳನ್ನು ಪರಿಗಣಿಸಿ ಮುಂದಿನ ಆಯವ್ಯಯದಲ್ಲಿ ಹೊಸ ಅಗ್ನಿಶಾಮಕ ಠಾಣೆ ನಿರ್ಮಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದರು.
ಸದ್ಯ ನಿಯಮಗಳ ಅನುಸಾರ ನಗರ ಪ್ರದೇಶದಲ್ಲಿ 10 ಚದರ ಕಿ.ಮೀಗೆ ಒಂದು ಹಾಗೂ ಗ್ರಾಮೀಣ ಪ್ರದೇಶದಲ್ಲಿ 50 ಚದರ ಕಿ.ಮೀಗೆ ಒಂದು ಅಗ್ನಿಶಾಮಕ ಠಾಣೆ ಕಾರ್ಯ ನಿರ್ವಹಿಸುತ್ತಿವೆ. ಅಗ್ನಿ ಕರೆಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೂಡಲಿಗೆ ತಾಲೂಕಿನ ವ್ಯಾಪ್ತಿಯಲ್ಲಿ ವಾರ್ಷಿಕವಾಗಿ ಸರಾಸರಿ 8 ರಿಂದ 10 ಅಗ್ನಿ ಕರೆಗಳು ಸ್ವೀಕೃತಗೊಳ್ಳುತ್ತಿವೆ. ಇವುಗಳಿಗೆ ಸ್ಪಂದಿಸಿ ಗೋಕಾಕ್ ಅಗ್ನಿಶಾಮಕ ಠಾಣೆಯಿಂದ ಬೆಂಕಿ ಅವಘಡಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಸಚಿವ ಡಾ.ಜಿ.ಪರಮೇಶ್ವರ್ ಶಾಸಕ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ ಅವರ ಪ್ರಶ್ನೆಗೆ ಉತ್ತರಿಸಿದರು.
ಮೂಡಲಗಿಯಲ್ಲಿ ಕಳೆದ ವರ್ಷ 2 ಶಾಪ್‍ಗಳಿಗೆ ಬೆಂಕಿ ಬಿದ್ದು ಕೋಟ್ಯಂತರ ರೂಪಾಯಿಗಳ ನಷ್ಟ ಸಂಭವಿಸಿದೆ. ಗೋಕಾಕ್ ದೂರ ಇರುವುದರಿಂದ ಮೂಡಲಗಿಯಲ್ಲೊಂದು ಅಗ್ನಿಶಾಮಕ ಠಾಣೆ ನಿರ್ಮಿಸುವ ಅಗತ್ಯವಿದೆ. ಈಗಾಗಲೇ 1.20 ಎಕರೆ ಜಮೀನು ಸಹ ಗುರುತಿಸಿ, ಗೃಹ ಇಲಾಖೆ ನೀಡಲಾಗಿದೆ. ಸರ್ಕಾರ ಆದ್ಯತೆ ಮೇರೆಗೆ ಕ್ರಮಕೈಗೊಳ್ಳಬೇಕು ಎಂದು ಶಾಸಕ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ ಕೋರಿದರು.
ಗೃಹ ರಕ್ಷಕರ ಕರ್ತವ್ಯ ಭತ್ಯೆ ಪರಿಷ್ಕರಣೆ : ಗೃಹ ರಕ್ಷಕರಿಗೆ ಬೇರೆ ರಾಜ್ಯಗಳಲ್ಲಿ ನೀಡುತ್ತಿರುವ ಭತ್ಯೆ ಅವಲೋಕಿಸಿ ಶೀಘ್ರವೇ ಕರ್ತವ್ಯ ಭತ್ಯೆಯನ್ನು ಪರಿಷ್ಕರಣೆ ಮಾಡುವುದಾಗಿ ಬಿಜೆಪಿ ಶಾಸಕಿ ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. 21,327 ಪುರುಷ ಹಾಗೂ 4555 ಮಹಿಳೆ ಸೇರಿ ಒಟ್ಟು 25,882 ಗೃಹರಕ್ಷಕರು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಆದೇಶದಂತೆ ಪೊಲೀಸ್ ಇಲಾಖೆಯ ಬಂದೋಬಸ್ತ್, ಕಾನೂನು ಸುವ್ಯವಸ್ಥೆ, ಸಂಚಾರ ನಿಯಂತ್ರಣ ಹಾಗೂ ಠಾಣೆ ಕಾರ್ಯಗಳಲ್ಲಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಿಗೆ ರೂ.750, ಬೇರೆ ಇಲಾಖೆಗಳಲ್ಲಿ ರೂ.600 ಹಾಗೂ ಪಹರೆ ಕೆಲಸಕ್ಕೆ ಬೆಂಗಳೂರು ನಗರದಲ್ಲಿ ರೂ. 455 ಹಾಗೂ ಇತರ ಸ್ಥಳದಲ್ಲಿ ರೂ.380 ಭತ್ಯೆ ನೀಡಲಾಗುತ್ತಿದೆ. ಈ ವ್ಯತ್ಯಾಸವನ್ನು ಸರಿಪಡಿಸಿ ರೂ.750 ದಿನಭತ್ಯೆ ನೀಡಲು ಸರ್ಕಾರ ಮಟ್ಟದಲ್ಲಿ ಚಿಂತಿಸಲಾಗುತ್ತಿದೆ ಎಂದು ಗೃಹ ಸಚಿವರು ತಿಳಿಸಿದರು. ಗೃಹರಕ್ಷಕರಲ್ಲಿ ಯಾವುದೇ ತಾರತಮ್ಯ ಇಲ್ಲದೇ ಕರ್ತವ್ಯಕ್ಕೆ ನಿಯೋಜಿಸಬೇಕು. ಗೃಹರಕ್ಷಕರಿಗೆ ಆರೋಗ್ಯ ಭದ್ರತೆ, ಪ್ರಯಾಣ ಭತ್ಯೆಗಳನ್ನು ನೀಡಬೇಕು ಎಂದು ಶಾಸಕಿ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಒತ್ತಾಯಿಸಿದರು.
ಇದನ್ನೂ ಓದಿ : ಈ ಅಧಿವೇಶನ ಪೂರ್ತಿ ಜನರ ಮೇಲೆ ತೆರಿಗೆ ಹಾಕುವ ಅಧಿವೇಶನವಾಗಿದೆ: ಆರ್. ಅಶೋಕ್