ಬೆಳಗಾವಿ: ಚುನಾವಣೆ ಇದ್ರೂ ಕಷ್ಟದಲ್ಲಿರುವವರಿಗಾಗಿ ಕೆಲಸ ಮಾಡಲು, ಸಾಂತ್ವನ ಹೇಳಲು ಸರ್ಕಾರ ಕಟಿಬದ್ದವಾಗಿದೆ ಎಂದು ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಉಂಟಾಗಿರುವ ಹಾನಿಯ ಕುರಿತು ಮಾಹಿತಿಯನ್ನು ಪಡೆದುಕೊಂಡ ಸಚಿವರು, ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾದ ಕ್ರಮಗಳನ್ನು ಪರಿಶೀಲಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಲ್ಲಿಯವರೆಗೂ 96 ಸಾವಿರ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ.14 ಸಾವಿರ ರೈತರಿಗೆ ಬೆಳೆ ಪರಿಹಾರ ಜಮಾವಣೆಗೊಂಡಿದೆ. ಕಳೆದ ವರ್ಷ ಹಾನಿಯಾದ 258 ಕೋಟಿ ಹಣವನ್ನ ರೈತರಿಗೆ ಪರಿಹಾರ ನೀಡಲಾಗಿದೆ. ಕಳೆದ ವರ್ಷ ಬೆಳಗಾವಿಗೆ 488 ಕೋಟಿ ರೂ. ಮನೆ ಹಾನಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದು, ಬಿದ್ದಿರುವ ಮನೆಗಳನ್ನು ಇನ್ನೆರಡು ತಿಂಗಳಲ್ಲಿ ಕಟ್ಟಿ ಮುಗಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಚುನಾವಣೆ ಇದ್ರೂ ಕಷ್ಟದಲ್ಲಿರುವವರಿಗೆ ಕೆಲಸ ಮಾಡಲು, ಸಾಂತ್ವನ ಹೇಳಲು ಸರ್ಕಾರ ಕಟಿಬದ್ದವಾಗಿದೆ. ಕಾಳಜಿ ಕೇಂದ್ರದಲ್ಲಿ ಸರಿಯಾದ ಆಹಾರ ನೀಡಲು ಆದೇಶ ಮಾಡಿದ್ದೇನೆ. ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ದುಡ್ಡು ಇರಲಿಲ್ಲ. ಅವರು ಸಾಲ ತೆಗೆದುಕೊಂಡಿದ್ದರು. ನಮ್ಮಲ್ಲಿ ದುಡ್ಡು ಇದೆ. ಯಾರು ಆರ್‌ಟಿಐ ನಲ್ಲಿ ಕೇಳಿದ್ರೂ ಕೊಡ್ತೇವೆ. ಈಗಾಗಲೇ ಜಿಲ್ಲಾಧಿಕಾರಿಗಳ ಅಕೌಂಟ್ ನಲ್ಲಿ 666 ಕೋಟಿಯಷ್ಟು ದುಡ್ಡಿದೆ ಎಂದರು.
ಬಿಜೆಪಿ ಸರ್ಕಾರ ಪರ್ಸಂಟೇಜ್ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತೀರುಗೇಟು ನೀಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪರ್ಸಂಟೇಜ್ ಇತ್ತು. ಅವರಿನ್ನೂ ಅಧಿಕಾರದಲ್ಲಿದ್ದೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಆದ್ರೆ, ಅವರು ಹೋಗಿ ಬಹಳ ದಿನವಾಗಿದೆ. ಸಮ್ಮಿಶ್ರ ಸರ್ಕಾರ ಬೀಳಿಸಿದ್ದೆ ಸಿದ್ದರಾಮಯ್ಯ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ. ಜಗಳದಿಂದ ಅವರಿನ್ನೂ ಹೊರ ಬಂದಿಲ್ಲ. ಉಪಚುನಾವಣೆಯಲ್ಲಿ ಅವರ ಸಾಧನೆ ಏನೂ ಅಂತಾ ಸ್ಪಷ್ಟವಾಗಿ ಗೊತ್ತಾಗುತ್ತೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಉಮೇಶ್ ಕತ್ತಿ, ದುರ್ಯೋಧನ ಐಹೊಳೆ ಇದ್ದರು.