ಬೆಳಗಾವಿ: ಅಕ್ರಮ ಆಸ್ತಿ ಸಂಪಾದಿಸಿದ ನಿವೃತ್ತ ಸಾರಿಗೆ ಅಧಿಕಾರಿಗೆ ನಾಲ್ಕು ವರ್ಷ ಕಠಿಣ ಶಿಕ್ಷೆ ಹಾಗೂ 63 ಲಕ್ಷ ರೂ ದಂಡ ವಿಧಿಸಿ ಬೆಳಗಾವಿಯ ಲೋಕಾಯುಕ್ತ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಕೋಲಾರ ಮೂಲದ ಬೆಳಗಾವಿಯ ಆಂಜನೇಯ ನಗರ ನಿವಾಸಿ ಪಿ ಶಾಂತಕುಮಾರ್ ಶಿಕ್ಷೆಗೆ ಒಳಗಾದವರು. ಬೀದರ್ ಜಿಲ್ಲೆಯ ಹುಮನಾಬಾದ್ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಆಗಿದ್ದಾಗ ಅಕ್ರಮವಾಗಿ ಅಪಾರ ಆಸ್ತಿ ಸಂಪಾದಿಸಿದ್ದರು. ಈ ಬಗ್ಗೆ ಗುಪ್ತ ಮಾಹಿತಿ ಕಲೆಹಾಕಿದ್ದ ಅಂದಿನ ಬೆಳಗಾವಿ ಲೋಕಾಯುಕ್ತ ಇನ್ಸ್ಪೆಕ್ಟರ್ ಆರ್. ಕೆ ಪಾಟೀಲ್ 2010ರ ಮೇ 3ರಂದು ಪ್ರಕರಣ ದಾಖಲಿಸಿದ್ದರು.
ಶಾಂತಕುಮಾರನು ಬೆಳಗಾವಿಯ ಆಂಜನೇಯ ನಗರದಲ್ಲಿ ಹೊಂದಿದ ಮನೆ ಹಾಗೂ ಹುಮನಾಬಾದ್ ಕಚೇರಿ ಮೇಲೆ ದಾಳಿ ಮಾಡಿದ ಅಧಿಕಾರಿಗಳಿಗೆ 1.14 ಕೋಟಿ ಆಸ್ತಿ ಸಿಕ್ಕಿತ್ತು. ಲೋಕಾಯುಕ್ತ ಇನ್ಸ್ಪೆಕ್ಟರ್ ಆಗಿದ್ದ ಆರ್. ಬಿ ಹವಾಲ್ದಾರ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಧೀಶ ಮೋಹನ ಪ್ರಭು ವಿಚಾರಣೆ ನಡೆಸಿದರು. ಇದರಲ್ಲಿ 63 ಲಕ್ಷ ರೂ. ಹಣವನ್ನು ಭ್ರಷ್ಟಾಚಾರದ ಹಾಗೂ ಅಕ್ರಮವಾಗಿ ಸಂಪಾದಿಸಿದ್ದಾರೆ ಎಂದು ಸಾಬೀತಾಗಿದೆ. ಆಪಾದಿತ ದಂಡ ಭರಿಸಲು ಸಾಧ್ಯವಾಗದಿದ್ದರೆ, ಆತನ ಪತ್ನಿಯ ಹೆಸರಿನಲ್ಲಿರುವ ಚರ ಮತ್ತು ಚಿರಾಸ್ತಿಗಳನ್ನು ಮುಟ್ಟುಗೋಲು ಹಾಕಲು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರವೀಣ ಅಗಸಗಿ ವಾದ ಮಂಡಿಸಿದ್ದರು.
ಓದಿ: ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆ ಭೇಟಿಗೆ ಮುತಾಲಿಕ್ಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್