ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಾಗಿದ್ದು, ಕಳೆದೊಂದು ವಾರದಿಂದ ನಿಯಂತ್ರಣಕ್ಕೆ ಬಂದಿದೆ. ಆದರೆ, ಅಲ್ಲಿನ ಪ್ರಮುಖ ದೇವಾಲಯಗಳಿಗೆ ಇಂದಿಗೂ ಸಹ ಭಕ್ತರ ಪ್ರವೇಶ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆ ಗಡಿ ಪ್ರದೇಶದ ಭಕ್ತರು ಮಹಾರಾಷ್ಟ್ರದ ಗಡಿಯಲ್ಲಿನ ದೇವಾಲಯಕ್ಕೆಂದು ತೆರಳಿ ದರ್ಶನವಾಗದೇ ಹಾಗೆಯೇ ಮರಳುತ್ತಿದ್ದಾರೆ.
ಕೊರೊನಾ ಭೀತಿಯಿಂದ ಮಹಾರಾಷ್ಟ್ರದ 8 ಸುಪ್ರಸಿದ್ಧ ದೇವಸ್ದಾನಗಳು ಇಂದಿನವರೆಗೂ ಮುಚ್ಚಿದ್ದು, ದಸರಾ ವೇಳೆಗೆ ಕರ್ನಾಟಕ ಭಕ್ತರು ದೇವಸ್ಥಾನಗಳಿಗೆ ಹೋಗಿ 9 ದಿನಗಳ ಕಾಲ ದೀಪಕ್ಕೆ ಎಣ್ಣೆ ಹಾಕುವುದು ವಾಡಿಕೆಯಾಗಿತ್ತು. ಅದರಂತೆ ಭಕ್ತರು ಪಕ್ಕದ ಮಹಾರಾಷ್ಟ್ರಕ್ಕೆ ಹೋಗಿ ದೇವರ ದರ್ಶನಕ್ಕೆ ಅವಕಾಶ ಸಿಗದೆ ನಿರಾಶೆಯಿಂದ ಮರಳುತ್ತಿದ್ದಾರೆ.
ಅಲ್ಲಿನ ಕೊಲ್ಲಾಪುರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ತುಳಜಾಪೂರದ ಶ್ರೀ ಅಂಬಾಬಾಯಿ, ಶ್ರೀ ನರಸಿಂಹ ದೇವಸ್ಥಾನ, ಅಳತೆಯ ಶ್ರೀರಾಮಲಿಂಗ ದೇವಸ್ಥಾನ, ಅಮದಾಪೂರದ ಶ್ರೀ ಬಾಳುಮಾಮಾ ದೇವಸ್ಥಾನ, ಪಾಠಣದ ಶ್ರೀನಾಯಕಬಾ ದೇವಸ್ಥಾನ, ಪಟ್ಟಣ ಕಡೋಲಿಯ ಶ್ರೀವಿಠ್ಠಲ ಬೀರದೇವ ದೇವಸ್ಥಾನಗಳು ದಸರಾ ಸಂದರ್ಭದಲ್ಲೂ ಮುಚ್ಚಿರಲಿವೆ.
ದಸರಾ ಪ್ರಯುಕ್ತ ಮಹಾರಾಷ್ಟ್ರದ ವಾಡಿ ರತ್ನಗಿರಿಯ ಶ್ರೀಜ್ಯೋತಿರ್ಲಿಂಗ ದೇವರ ದರ್ಶನಕ್ಕೆ ತೆರಳಿದ ರಾಜ್ಯದ ಭಕ್ತರನ್ನು ಪೊಲೀಸರು ಅರ್ಧದಲ್ಲಿಯೇ ತಡೆದು ಮರಳಿ ಊರಿಗೆ ಕಳುಹಿಸಿದ್ದಾರೆ.
ಕೊಲ್ಲಾಪುರ ಮಹಾಲಕ್ಷ್ಮಿ ದೇವರ ದರ್ಶನ ಭಾಗ್ಯವಿಲ್ಲ
ಜನದಟ್ಟಣೆ ತಡೆಗಟ್ಟಲು ಇಡೀ ಮಹಾಲಕ್ಷ್ಮಿ ಮಂದಿರ ಸೀಲ್‌ಡೌನ್ ಮಾಡಲಾಗುತ್ತಿದ್ದು, ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಹೊರಗಿನ ಮಹಾದ್ವಾರದಿಂದಲೇ ದರ್ಶನ ಪಡೆದು ಹೋಗುವ ವ್ಯವಸ್ಥೆ ಮಾಡಲಾಗಿದೆ.
ಮಂದಿರದ ಗರ್ಭಗುಡಿಯಲ್ಲಿ ಅಧಿಕೃತ ಅರ್ಚಕರಿಂದ ಪರಂಪರೆಯಂತೆ ನವರಾತ್ರಿ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. 9 ದಿನಗಳವರೆಗೆ ವಿಶೇಷ ಅಲಂಕಾರದಲ್ಲಿ ಮಹಾಲಕ್ಷ್ಮಿ ಪೂಜೆ ನಡೆಯಲಿದೆ. ಅಲ್ಲದೆ ಪ್ರತಿದಿನ ಮಹಾಲಕ್ಷ್ಮಿಗೆ 9 ವಿವಿಧ ಬಣ್ಣಗಳ ಸೀರೆಗಳಿಂದ ಅಲಂಕಾರ ಮಾಡಲಾಗುತ್ತದೆ. ಭಕ್ತರು ಆನ್ಲೈನ್ನಲ್ಲಿ kholapure shree Mahalaxmi today Darshan ಫೇಸ್ಬುಕ್ ಪೇಜ್ ಮೂಲಕವೂ ದರ್ಶನ ಪಡೆಯಬಹುದಾಗಿದೆ.