ಚಿಕ್ಕೋಡಿ : ಮಹಾರಾಷ್ಟ್ರದ ಕೃಷ್ಣಾ ನದಿ ಪ್ರದೇಶದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ಗಡಿ ಭಾಗದ ನದಿ ತೀರದ ನೆರೆ ಸಂತ್ರಸ್ತರು ಕೊಂಚ ನಿರಾಳರಾಗಿದ್ದಾರೆ.
ಜಲಾಶಯಗಳಿಂದ ನೀರು ಹೊರಬಿಡುವ ಪ್ರಮಾಣದಲ್ಲಿ ಮಹಾರಾಷ್ಟ್ರ ಸರ್ಕಾರ ಹಂತ ಹಂತವಾಗಿ ಕಡಿಮೆ ಮಾಡುತ್ತಿದೆ. ಇದರಿಂದಾಗಿ ನದಿ ತೀರದ ಜನರಿಗೆ ನೆರೆ ಭೀತಿ ದೂರವಾಗಿದೆ. ಕೃಷ್ಣಾ ನದಿಗೆ ಮತ್ತೆ ಪ್ರವಾಹ ಬರುತ್ತದೆ ಎಂಬ ಚಿಂತೆಯಲ್ಲಿದ್ದ ಜನರು ಇದೀಗ ನಿಟ್ಟುಸಿರು ಬಿಡುವಂತಾಗಿದೆ.
ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಮತ್ತಷ್ಟು ಕಡಿಮೆಯಾದರೆ ಎರಡು ದಿನದಲ್ಲಿ ಚಿಕ್ಕೋಡಿ ಉಪವಿಭಾಗದ ಜಲಾವೃತ್ತಗೊಂಡ 6 ಕ್ಕಿಂತ ಹೆಚ್ಚು ಸೇತುವೆಗೆಳು ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದ ಕಲ್ಲೋಳ ಬಳಿ ಕೃಷ್ಣಾ ನದಿಗೆ 1,40,360 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ರಾಜಾಪುರ ಬ್ಯಾರೇಜ್‌ನಿಂದ 1,21,000 ಕ್ಯೂಸೆಕ್ ಮತ್ತು ದೂಧ್‌ಗಂಗಾ, ವೇದಗಂಗಾ ನದಿಯಿಂದ 19,360 ಕ್ಯೂಸೆಕ್ ಸೇರಿದಂತೆ ತಾಲೂಕಿನ ಕಲ್ಲೋಳ ಬಳಿ 1,40,360 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ.
ಕೊಯ್ನಾ ಜಲಾಶಯದಿಂದ 16,110 ಕ್ಯೂಸೆಕ್, ದೂಮ್ ಜಲಾಶಯದಿಂದ 1,437 ಕ್ಯೂಸೆಕ್, ಕನೇರ್ ಜಲಾಶಯದಿಂದ 1,686 ಕ್ಯೂಸೆಕ್, ಉರ್ಮಡಿ ಡ್ಯಾಂನಿಂದ 1,436 ಕ್ಯೂಸೆಕ್, ವಾರಣಾ ಜಲಾಶಯದಿಂದ 4,552 ಕ್ಯೂಸೆಕ್, ರಾಧಾನಗರಿ ಜಲಾಶಯದಿಂದ 1,400 ಕ್ಯೂಸೆಕ್, ಧೂದ್ಗಂಗಾ ಜಲಾಶಯದಿಂದ 900 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ.