ಚಿಕ್ಕೋಡಿ (ಬೆಳಗಾವಿ): ಕಷ್ಟದಲ್ಲಾದವರೇ ಆಪತ್ಬಾಂಧವರು ಅನ್ನೋ ಹಾಗೆ ಪ್ರವಾಹದಲ್ಲಿ ಸಿಲುಕಿ ಪರದಾಡುತ್ತಿದ್ದವರ ಪಾಲಿಗೆ ಈ ಯುವತಿ ನಿಜಕ್ಕೂ ದೇವರಾಗಿ ಬಂದಿದ್ದಾಳೆ. ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಯಲ್ಲಿ ಕಾಗವಾಡ ತಾಲೂಕಿನ ಮೊಳವಾಡ ಗ್ರಾಮದ ನಿವಾಸಿ ರಾಣಿ ಅಂಬಿ ಗಂಡೆದೆಯ ರಾಣಿ ಅಂತಲೇ ಹೆಸರಾಗಿದ್ದಾರೆ.
ತಂದೆ ಮಾಡುತ್ತಿದ್ದ ಈ ಕಾಯಕವನ್ನ ಆತ ತೀರಿಕೊಂಡ ಬಳಿಕ ರಾಣಿ ಅಜ್ಜಿ ಮಾಡುತ್ತಿದ್ದರು. ಬಳಿಕ ಅಜ್ಜಿಯೂ ತೀರಿಕೊಂಡಿದ್ದು, ಈಗ ಸಂಸಾರ ನೌಕೆ ಸಾಗಿಸಲು ರಾಣಿ ಬೋಟ್ ಓಡಿಸುವ ಕಾಯಕ ಮಾಡುತ್ತಿದ್ದಾರೆ. ಚಿಂಚಲಿ ಹಾಗೂ ಮೊಳವಾಡ ಗ್ರಾಮಗಳ ನಡುವೆ ಹರಿದಿರುವ ಕೃಷ್ಣಾ ನದಿಗೆ ಈಕೆಯ ಬೋಟ್ ಸಂಪರ್ಕ ಕೊಂಡಿಯಾಗಿದೆ.
ಉಕ್ಕಿ ಹರಿಯುವ ಕೃಷ್ಣೆಯ ಪ್ರವಾಹ ಲೆಕ್ಕಿಸದೆ, ಬೋಟ್ ಏರುವ ರಾಣಿ, ಈವರೆಗೆ ಸುಮಾರು ಎರಡು ಸಾವಿರ ಜನರನ್ನ ಸುರಕ್ಷಿತವಾಗಿ ದಡ ಮುಟ್ಟಿಸಿದ್ದಾರೆ. 2019ರ ಮಹಾಪ್ರವಾಹದಲ್ಲಿ ಊರ ಜನರನ್ನು ಕೃಷ್ಣೆಯ ರಭಸದಲ್ಲಿ ದಡ ಸೇರಿಸಿದ್ದರು. ಈ ವರ್ಷವೂ ಜನರ ಜೀವ ಕಾಪಾಡಿದ್ದಾರೆ.
ಮೊದಲೆಲ್ಲಾ ಹುಟ್ಟು ಹಿಡಿದು ಬೋಟ್ ನಡೆಸಬೇಕಿತ್ತು, ಈ ವಿಷಯ ತಿಳಿದ ಶಾಸಕ ಶ್ರೀಮಂತ ಪಾಟೀಲ್ ಅವರ ಪೌಂಡೇಶನ್ ವತಿಯಿಂದ ಪೆಟ್ರೋಲ್ ಚಾಲಿತ ಬೋಟ್ ನೀಡಲಾಯಿತು. ಹೀಗಾಗಿ ಪ್ರವಾಹದ ಸಮಯದಲ್ಲಿ ಜನರು ಮಾತ್ರವಲ್ಲ, ಜಾನುವಾರುಗಳನ್ನೂ ಸಹ ಸುರಕ್ಷಿತವಾಗಿ ದಡ ಸೇರಿಸಿದ್ದಾಳೆ ರಾಣಿ.
ತನ್ನ ಜೀವನ ನಿರ್ವಹಣೆಗೆ ಈ ಬೋಟ್ ಅನ್ನೇ ನಂಬಿ ಬದುಕುತ್ತಿರುವ ರಾಣಿ, ಪ್ರವಾಹದ ಸಂದರ್ಭ ಹೊರತಾಗಿ ಉಳಿದ ದಿನಗಳಲ್ಲಿ ಒಬ್ಬರಿಗೆ 5 ರೂಪಾಯಿ ಹಾಗೂ ಬೈಕ್ಗೆ 10 ರೂಪಾಯಿ ಶುಲ್ಕ ಪಡೆಯುತ್ತಾರೆ. ಈಕೆಯ ಕಾರ್ಯಕ್ಕೆ ಗ್ರಾಮಸ್ಥರು ಸಲಾಮ್ ಹೊಡೆದು, ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಓದಿ: ಕಳ್ಳದಾರಿ ಮೂಲಕ ಬೆಳಗಾವಿ ನಗರಕ್ಕೆ ಆಗಮಿಸುತ್ತಿರುವ ಮಹಾರಾಷ್ಟ್ರದ ಜನರು