ಬೆಳಗಾವಿ: ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ದೂರು ವಾಪಸ್ ಪಡೆಯಲು ನಾಗರಿಕ ಹಕ್ಕು ಸಮಿತಿ ಹೋರಾಟಗಾರ ದಿನೇಶ ಕಲ್ಲಹಳ್ಳಿ ನಿರ್ಧಾರ ಮಾಡಿರುವ ಹಿನ್ನೆಲೆ ಗೋಕಾಕಿನ ರಮೇಶ ಜಾರಕಿಹೊಳಿಯವರ ಗೃಹ ಕಚೇರಿ ಎದುರು ಅಭಿಮಾನಿಗಳು, ಬಿಜೆಪಿ ಮುಖಂಡರು ಸೇರಿ ಸಂಭ್ರಮಾಚರಣೆ ಮಾಡಿದರು.
ಜಿಲ್ಲೆಯ ಗೋಕಾಕ ನಗರದ ಫಾಲ್ಸ್ ರಸ್ತೆಯಲ್ಲಿರುವ ಗೃಹ ಕಚೇರಿಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿಗರು ಸಂಭ್ರಮಿಸಿ, ರಮೇಶಗೆ ಜೈಕಾರ ಹಾಕಿದರು. ಈ ವೇಳೆ ಸತ್ಯಮೇವ ಜಯತೆ ಎಂದು ರಮೇಶ ಜಾರಕಿಹೊಳಿ ಅಭಿಮಾನಿಗಳು ಘೋಷಣೆ ಕೂಗಿದರು.
ಓದಿ: ಜಾರಕಿಹೊಳಿ ಸಿಡಿ ಪ್ರಕರಣ: ದೂರು ವಾಪಸ್ ಪಡೆಯಲಿರುವ ದಿನೇಶ್ ಕಲ್ಲಹಳ್ಳಿ
ಕಳೆದ 3-4 ದಿನಗಳಿಂದ ಬೆಳಗಾವಿ ಹಾಗೂ ಗೋಕಾಕ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಬೆಂಬಲಿಗರು ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಪ್ರತಿಭಟನೆ ನಡೆಸಿದ್ದರು. ಇಂದು ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರನ್ನು ವಾಪಸ್ ಪಡೆಯುವುದಾಗಿ ಹೇಳಿದ್ದರಿಂದ ಬೆಂಬಲಿಗರ ಸಂಭ್ರಮಾಚರಣೆ ಮುಗಿಲು ಮಟ್ಟಿದೆ.