ಚಿಕ್ಕೋಡಿ: ಮೈತ್ರಿ ಸರ್ಕಾರ ಪತನ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ರಮೇಶ್ ಜಾರಕಿಹೊಳಿ ಅಭಿಮಾನಿಗಳಿಂದ ಟ್ರೋಲ್ಗಳು ಹೆಚ್ಚಾಗಿದ್ದು ಗೋಕಾಕ್ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾರೆ.
ಅಭಿಮಾನಿಗಳು ತಮ್ಮ ಫೇಸ್ಬುಕ್, ವಾಟ್ಸಾಪ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯಲ್ಲಿ ಜಾರಕಿಹೊಳಿ ಅವರ ಪೋಟೋ ಟ್ರೋಲ್ ಮಾಡಿ ಪೋಸ್ಟ್ ಹಾಕುತ್ತಿದ್ದಾರೆ. ಉತ್ತರ ಕರ್ನಾಟಕ ಮಂದಿ ಎಂಬ ಫೇಸ್ಬುಕ್ ಖಾತೆಯಲ್ಲಿ ರಮೇಶ್ ಜಾರಕಿಹೊಳಿ ಪೋಟೋದೊಂದಿಗೆ 'ಉತ್ತರ ಕರ್ನಾಟಕ ತಂಟೆಗೆ ಬಂದ್ರ ಏನಾಯ್ತು ಅಂತ ಗೊತ್ತಲ್ಲ - ಗುರಾಯಿಸಿದ್ರೆ ಗುಮ್ಮತಿವಿ' ಎಂದು ಪೋಸ್ಟ್ ಹಾಕಲಾಗಿದೆ. ಮತ್ತೊಂದು ಖಾತೆಯಲ್ಲಿ 'ಸರಣಿ ಶ್ರೇಷ್ಠ ಪ್ರಶಸ್ತಿ ಭಾಜನರಾದ ಗೋಕಾಕ ಸಾಹುಕಾರ - ರಮೇಶ ಜಾರಕಿಹೊಳಿ' ಎಂದು, ಅದೇ ರೀತಿ ಬೆಳಗಾವಿ ಪೇಜ್ನಲ್ಲಿ 'RAMESH JARAKIHOLI FINISHES OFF IN HIS STYLE - ಹೆಂಗ ನಮ್ಮ ಶಾಸಕರ ಹವಾ ' ಎಂದು ಟ್ರೋಲ್ ಮಾಡಲಾಗಿದೆ.
ಮತ್ತೆ ಕೆಲವು ಅಭಿಮಾನಿಗಳು 'ಛಲ ಬಿಡದೆ ತಮ್ಮ ಹಟ್ಟಕ್ಕೆ ಬಿದ್ದು ಮೈತ್ರಿ ಸರ್ಕಾರವನ್ನು ಕೆಡವೇ ತೀರುತ್ತೇನೆಂಬ ಮಾತಿಗೆ ಬದ್ಧರಾಗಿ ಕೆಲಸ ಮುಗಿಸಿ ಬಂದಿದ್ದಾರೆ ನಮ್ಮ ಸಾಹುಕಾರರು' ಎಂದು ಅಭಿಮಾನಿಗಳು ತಮ್ಮ ತಮ್ಮ ಮನೋಭಾವನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮೂಲಕ ವ್ಯಕ್ತಪಡಿಸಿದ್ದಾರೆ.