ಬೆಳಗಾವಿ: ಮೈತ್ರಿ ಸರ್ಕಾರ ಪತನದ ವೇಳೆ ನಮ್ಮೊಂದಿಗಿದ್ದ ಆರ್.ಶಂಕರ್ ಅವರಿಗೆ ನೂರಕ್ಕೆ ನೂರರಷ್ಟು ವಿಧಾನ ಪರಿಷತ್ಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಶಂಕರ್ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಹೀಗಾಗಿ ಅವರು ಪರಿಷತ್ ಸದಸ್ಯರಾಗ್ತಾರೆ. ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಹೈಕಮಾಂಡ್ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಿದೆ. ಎಲ್ಲರಿಗೂ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ನೇತೃತ್ವ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ವಹಿಸುತ್ತಾರೆ. ಅವರಿಬ್ಬರೂ ಕೈಗೊಂಡ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ ಎನ್ನುವ ಮೂಲಕ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಮೇಶ್ ಕತ್ತಿ ಪ್ಯಾನಲ್‌ಗೆ ಬೆಂಬಲ ನೀಡುವುದಾಗಿ ಪರೋಕ್ಷವಾಗಿ ಒಪ್ಪಿಕೊಂಡರು.
ಬೀಮ್ಸ್ ಕೋವಿಡ್ ವಾರ್ಡ್‌ನಲ್ಲಿನ ಅವ್ಯವಸ್ಥೆ ಬಗ್ಗೆ ಡಿಸಿ ಜೊತೆ ಮಾತನಾಡಿದ್ದೇನೆ. ಯಾರಾದರೂ ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲವು ತಾಲೂಕು ಪಂಚಾಯತ್ ಸದಸ್ಯರು ಫೋನ್‌ನಲ್ಲಿ ದೂರು ನೀಡಿದ್ದರು. ಈ ಕಾರಣಕ್ಕೆ ಪ್ರತ್ಯೇಕವಾಗಿ ಗ್ರಾಮೀಣ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ಕರೆದಿದ್ದೆ. ಆದರೆ ಸಭೆಯಲ್ಲಿ ಯಾರೂ ಮಾತನಾಡಲಿಲ್ಲ. ದೂರು ನೀಡಿದವರು ಏಕೆ ಮಾತನಾಡಿಲ್ಲ ಎಂಬುದನ್ನು ಕೇಳ್ತೀನಿ ಎಂದರು.