ಬೆಳಗಾವಿ: ನಕಲಿ ಸಿಡಿ ತಯಾರಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೆಸರನ್ನು ತೇಜೊವಧೆ ಮಾಡಲಾಗಿದೆ. ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿ ರಮೇಶ್ ಬೆಂಬಲಿಗರು ಪಾದಯಾತ್ರೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು.
ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ಬಸ್ ನಿಲ್ದಾಣದಿಂದ ಪೊಲೀಸ್ ಕಚೇರಿಗೆ ತೆರಳಿದ ಬೆಂಬಲಿಗರು, ಪ್ರಕರಣವನ್ನು ಸಿಬಿಐ ಇಲ್ಲವೇ ಸಿಐಡಿ ತನಿಖೆ ನಡೆಸಬೇಕು ಎಂದು ಮನವಿ ಸಲ್ಲಿಸಿದರು.
ದಿನೇಶ್ ವಿರುದ್ಧ ಧಿಕ್ಕಾರ ಕಗಿದ ಬೆಂಬಲಿಗರು:
ಇದಕ್ಕೂ ಮುನ್ನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರಮೇಶ್ ಬೆಂಲಿಗರು, ದಿನೇಶ್ ಕಲ್ಲಹಳ್ಳಿ ಪ್ರತಿಕೃತಿ ಹಾಗೂ ಟೈಯರ್‌ಗೆ ಬೆಂಕಿ ಹಚ್ಚಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಮೇಶ್ರವರ ಬೆಳವಣಿಗೆ ಸಹಿಸದ ಕೆಲವರು ಅವರ ಹೆಸರನ್ನು ಕೆಡಿಸುವ ಮೂಲಕ ರಾಜಕೀಯ ಹಿನ್ನೆಡೆ ಮಾಡಬೇಕೆಂಬ ಹುನ್ನಾರ ಮಾಡಿದ್ದಾರೆ. ಸಿಡಿ ಪ್ರಕರಣದ ಹಿಂದೆ ವ್ಯವಸ್ಥಿತ ಷಡ್ಯಂತ್ರ ಅಡಗಿದೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ ಅಂಕಲಗಿ ಪೊಲೀಸ್ ಠಾಣೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬೃಹತ್ ಪ್ರತಿಭಟನಾ ರ‍್ಯಾಲಿ :
![Ramesh Jarkiholi supporters protested in Belgaum](https://etvbharatimages.akamaized.net/etvbharat/prod-images/10893023_thumjpg.jpg)
ಇದಲ್ಲದೇ ಮಮದಾಪುರ ಹಾಗೂ ಯರಗಟ್ಟಿ - ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಧರಣಿ ನಡೆಸಿ ಪ್ರತಿಭಟನೆ ನಡೆಸಿದರು. ಇತ್ತ ಗೋಕಾಕ್ ನಗರದಲ್ಲೂ ಬೆಂಬಲಿಗರು ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸುತ್ತಿದ್ದಾರೆ.
ಎಸ್ಪಿ ಸೂಚನೆಯನ್ನು ಗಾಳಿಗೆ ತೂರಿದ್ರಾ ಅಂಕಲಗಿ ಪೊಲೀಸರು:
ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗವಾದ ಹಿನ್ನೆಲೆಯಲ್ಲಿ ಅಂಕಲಗಿ ಗ್ರಾಮವನ್ನು ಬಂದ್ ಮಾಡಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಪರಿಣಾಮ ಗ್ರಾಮದ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ, ಅಂಕಲಗಿ ಪೊಲೀಸರ ಎದುರೇ ರಮೇಶ್ ಬೆಂಬಲಿಗರು ಟೈಯರ್‌ಗೆ ಬೆಂಕಿ ಹಚ್ಚಿದ್ದರು. ಆದರೆ ಯಾವೊಬ್ಬ ಪೊಲೀಸರು ಬೆಂಕಿ ಹಚ್ಚುವುದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ.
ಟೈಯರ್‌ಗೆ ಬೆಂಕಿ ಹಚ್ಚದಂತೆ ನೋಡಿಕೊಳ್ಳಲು ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಸೂಚನೆ ನೀಡಿದ್ದರು. ಆದರೆ, ಎಸ್ಪಿ ಸೂಚನೆಯನ್ನೇ ಅಂಕಲಗಿ ಪೊಲೀಸರು ಗಾಳಿಗೆ ತೂರಿದ್ದು ಕಂಡು ಬಂತು. ನಿನ್ನೆ ಟೈಯರ್‌ಗೆ ಬೆಂಕಿ ಹಚ್ಚಿರುವ ಸಂದರ್ಭದಲ್ಲಿ ಟೈಯರ್ ಮೇಲೆ ಜಿಗಿದು ರಮೇಶ್ ಜಾರಕಿಹೊಳಿ ಅಭಿಮಾನಿ ಆತ್ಮಹತ್ಯೆಗೆ ಯತ್ನಿಸಿದ್ದರು. ಎಸ್ಪಿ ಸೂಚನೆಯಿಂದ ಎತ್ತೆಚ್ಚುಕೊಳ್ಳದೇ ಅಂಕಲಗಿ ಪೊಲೀಸರು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗುತ್ತಿದೆ.