ಬೆಳಗಾವಿ: ರಮೇಶ್ ಜಾರಕಿಹೊಳಿ ನಮ್ಮ ಪಕ್ಷಕ್ಕೆ ಬುದ್ಧಿ ಹೇಳುವ ಅವಶ್ಯಕತೆ ಇಲ್ಲ. ಅವರ ಪಕ್ಷದಲ್ಲಿಯೇ ಬಂಡಾಯವಾಗಿ ಸ್ಪರ್ಧೆ ಮಾಡಿದ್ದಾರೆ. ಮೊದಲು ತಮ್ಮ ಪಕ್ಷದ ಬಗ್ಗೆ ವಿಚಾರ ಮಾಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಇರುವಂತ ಮತಗಳಲ್ಲಿ ಎರಡು ಸ್ಥಾನ ಗೆಲ್ಲಲ್ಲಿಕ್ಕೆ ಸಾಧ್ಯವಿಲ್ಲ. ಅವರ ಪಕ್ಷದಲ್ಲಿಯೇ ಗೊಂದಲವಿದೆ. ರಮೇಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ ಅಥವಾ ಮಹಾಂತೇಶ್ ಕವಟಗಿಮಠ ಇಬ್ಬರಲ್ಲಿ ಒಬ್ಬರನ್ನು ಗೆಲ್ಲಿಸಬೇಕು. ಇಬ್ಬರನ್ನೂ ಗೆಲ್ಲಿಸುವ ಶಕ್ತಿ ಅವರಲ್ಲಿ ಇಲ್ಲ ಎಂದರು.
ಲಖನ್ ಬಗ್ಗೆ ಬಹಳಷ್ಟು ಟೀಕೆ ಮಾಡಿದ್ದೇವೆ. ಅವರಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಇಲ್ಲಿ ನಮ್ಮ ಪಕ್ಷ ಗೆಲ್ಲಬೇಕು. ಅದರಿಂದ ನಮಗೆ ಗೌರವ ಬರಲಿದೆ. ಲಖನ್, ಬಿಜೆಪಿ ಕಾಂಗ್ರೆಸ್ ಎದುರಾಳಿಗಳು. ಅವರ ವಿರುದ್ಧವೇ ಚುನಾವಣೆ ಮಾಡುತ್ತಿದ್ದೇವೆ. ಸದ್ಯಕ್ಕೆ ಅವರು ಈ ಚುನಾವಣೆ ಮಾಡುವುದರಿಂದ ಸಂಬಂಧ ಜೋಡಿಸುವುದು ಸರಿಯಲ್ಲ ಎಂದರು.
ಬಿಜೆಪಿಯಲ್ಲಿಯೇ ಗೊಂದಲವಿದೆ. ಬಿಜೆಪಿ ಪಕ್ಷದ ಬ್ಯಾನರ್ನಲ್ಲಿ ರಮೇಶ್ ಜಾರಕಿಹೊಳಿ ಕಾರ್ಯಕ್ರಮ ಮಾಡುತ್ತಾರೆ. ಅದೇ ವೇದಿಕೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ವೋಟ್ ಹಾಕಿ ಎನ್ನುತ್ತಾರೆ. ಮೊದಲು ಅದನ್ನು ಸರಿ ಮಾಡಿಕೊಳ್ಳಲು ಹೇಳಿ ಎನ್ನುವ ಮೂಲಕ ಎದುರಾಳಿಗಳಿಗೆ ತಿರುಗೇಟು ನೀಡಿದರು.
ಗ್ರಾಪಂನಲ್ಲಿ ಕಾಂಗ್ರೆಸ್ನವರೇ ಹೆಚ್ಚು ಗೆದ್ದಿದ್ದಾರೆ:
ಬೆಳಗಾವಿಯಲ್ಲಿ ಬಿಜೆಪಿ ಶಾಸಕರು ಹೆಚಿದ್ದರೂ ಕೂಡ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಸದಸ್ಯರು ಅಧಿಕವಾಗಿದ್ದಾರೆ. ನಿಪ್ಪಾಣಿಯಲ್ಲಿ ಹೆಚ್ಚಿನ ಸದಸ್ಯರು ಕಾಂಗ್ರೆಸ್ನವರಿದ್ದು, ರಾಯಬಾಗ, ಕುಡಚಿ, ಅಥಣಿಯಲ್ಲಿಯೂ ಇದ್ದಾರೆ. ಕಾಗವಾಡದಲ್ಲಿ ಮಾತ್ರ ಕಡಿಮೆ ಇದೆ. ಕ್ಷೇತ್ರದಲ್ಲಿ ಶಾಸಕರ ಸಂಖ್ಯೆ ಹೆಚ್ಚಿದ್ದರೂ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಸದಸ್ಯರು ಗೆದ್ದಿದ್ದಾರೆ. ಹಾಗಾಗಿ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ವಿವೇಕರಾವ್ ಪಾಟೀಲ್ ಬಿಟ್ಟು, ಚನ್ನರಾಜ್ ಹಟ್ಟಿಹೊಳಿ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಪಕ್ಷೇತರವಾಗಿ ಲಖನ್ ಸ್ಪರ್ಧೆ ಮಾಡಿಸಿದ್ದೇನೆ ಎಂಬ ರಮೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ವಿವೇಕರಾವ್ ಪಾಟೀಲ್ ಅವರ ಮೇಲೆ ಅಷ್ಟೊಂದು ಪ್ರೀತಿ ಇದ್ದಿದ್ದೇ ಆದರೆ ಲಖನ್ ಜಾಗದಲ್ಲಿ ವಿವೇಕರಾವ್ ಪಾಟೀಲ್ ನಿಲ್ಲಿಸಬೇಕಿತ್ತು. ಯಾಕೆ ಹಾಗೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಸಹೋದರ ರಮೇಶ್ ಹೇಳಿಲ್ಲ: ಲಖನ್ ಜಾರಕಿಹೊಳಿ