ಬೆಳಗಾವಿ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೈಕಮಾಂಡ್ ಅನುಮತಿ ನೀಡಿದ್ರೇ ಗೋಕಾಕ್ ದಿಂದ ಸ್ಪರ್ಧಿಸುವೆ ಎಂಬ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಸಚಿವ ರಮೇಶ್ ಜಾರಕಿಹೊಳಿ ಮತ್ತೊಮ್ಮೆ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹೆಬ್ಬಾಳ್ಕರ್ ನನ್ನ ವಿರುದ್ಧ ಸ್ಪರ್ಧಿಸುವುದಾದ್ರೆ ಸ್ವಾಗತಿಸುತ್ತೇನೆ. ಆದರೆ ಶಾಸಕಿ ಹತಾಶೆಯಿಂದಲೇ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಮೈಂಡ್ ಔಟ್ ಆಗಿದೆ, ಬಿಟ್ಟು ಬಿಡಿ. ಅವರನ್ನು ಇನ್ಮುಂದೆ ಬಸ್ ನಿಲ್ದಾಣದಲ್ಲಿ ಹುಡುಕಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ಭದ್ರಾ ರಾಷ್ಟ್ರೀಯ ಯೋಜನೆ:
ಭದ್ರಾಯೋಜನೆಯನ್ನ ಈಗಾಗಲೇ ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಈ ಸಂಬಂಧ ಫೆಬ್ರವರಿ 21 ಹಾಗೂ 22ರಂದು ದೆಹಲಿಗೆ ಭೇಟಿ ನೀಡಿ ಚರ್ಚೆ ಮಾಡುತ್ತೇನೆ. ರಾಷ್ಟ್ರೀಯ ಯೋಜನೆಯಾದ್ರೆ ಶೇ. 90ರಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ. 10ರಷ್ಟು ಅನುದಾನ ನೀಡಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನೂ ರಾಷ್ಟ್ರೀಯ ಯೋಜನೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಮಹದಾಯಿ ಯೋಜನೆ ಆರಂಭ ಕುರಿತು ದೆಹಲಿಯಲ್ಲಿ ಸಭೆ ಮಾಡುತ್ತೇವೆ ಎಂದರು.
ಮೀಸಲು ಹೆಚ್ಚಳದಲ್ಲಿ ಸಿಎಂ ಪಾಸಿಟಿವ್ ಇದ್ದಾರೆ;
ಎಸ್ಟಿ ಮೀಸಲಾತಿ ಹೆಚ್ಚಿಸುವ ಬಗ್ಗೆ ನಾನು ಮಂತ್ರಿಯಾಗಿ ಯಡಿಯೂರಪ್ಪ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ. ಸಮಾಜದ ಮುಖಂಡನಾಗಿ ಸ್ವಾಮೀಜಿ ತೆಗೆದುಕೊಳ್ಳುವ ನಿರ್ಣಯಕ್ಕೂ ಬದ್ಧನಾಗಿರುತ್ತೇನೆ. ವಾಲ್ಮೀಕಿ ಸಮಾಜಕ್ಕೆ ಉದ್ಯೋಗ ಮತ್ತು ಶಿಕ್ಷಣಕ್ಕೆ ಮೀಸಲಾತಿ ಕೊಡಿ ಅಂತಾ ಅಷ್ಟೇ ಕೇಳುತ್ತಿದ್ದೇವೆ. ರಮೇಶ್ ಜಾರಕಿಹೊಳಿಯಾಗಿ ಸಮಾಜ ಹೇಳಿದ ಮಾತನ್ನು ಕೇಳಬೇಕಾಗುತ್ತೆ. ವಾಲ್ಮೀಕಿ ಸಮುದಾಯಕ್ಕೆ ಮೀಸಲು ನೀಡಲು ತಾಂತ್ರಿಕ ಸಮಸ್ಯೆ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ. ನಮ್ಮ ಸಮಾಜದ ಬಗ್ಗೆ ಸಿಎಂ ಯಡಿಯೂರಪ್ಪ ಪಾಸಿಟಿವ್ ಆಗಿದ್ದಾರೆ. ಅವರ ಮನಸ್ಸಲ್ಲಿ ಮೀಸಲಾತಿ ಹೆಚ್ಚಿಸಬಾರದು ಅಂತಿದ್ರೇ ಅವತ್ತು ಕಾರ್ಯಕ್ರಮಕ್ಕೆ ಬರ್ತಿರಲಿಲ್ಲ. ಸಮಾವೇಶದಲ್ಲಿ ಸಿಎಂ ಸಮ್ಮುಖದಲ್ಲಿ ನನ್ನ ಬಗ್ಗೆ ಸತೀಶ್ ಜಾರಕಿಹೊಳಿ ವ್ಯಂಗ್ಯದ ರೀತಿಯಲ್ಲಿ ಮಾತನಾಡಿದ್ದಾರೆ ಎಂದರು.
ಇದನ್ನೂ ಓದಿ:ವೀರಶೈವ ಲಿಂಗಾಯತ ಒಬಿಸಿ ಬೇಡಿಕೆ, ದೊಡ್ಡ ದೊಡ್ಡ ಮಠಾಧೀಶರ ಮೌನವೇಕೆ: ದಿಂಗಾಲೇಶ್ವರ ಶ್ರೀ ಪ್ರಶ್ನೆ