ಬೆಳಗಾವಿ: ಜಿಲ್ಲೆಯ ಪ್ರಮುಖ ನದಿಗಳ ಒತ್ತುವರಿ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಲು ಶೀಘ್ರವೇ ಸಮಿತಿ ರಚಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ಹಾಗೂ ಬಳ್ಳಾರಿ ನಾಲೆಗಳ ಅತಿಕ್ರಮಣದಿಂದ ಪ್ರವಾಹ ಪರಿಸ್ಥಿತಿ ಎದುರಾಗುತ್ತಿದೆ. ಹೀಗಾಗಿ ನದಿಗಳ ಉಗಮಸ್ಥಾನದಿಂದ ಕೂಡಲಸಂಗಮವರೆಗೆ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಈ ಸಂಬಂಧ ಸೆ.7ರಂದು ಸಭೆ ನಡೆಸಲಿದ್ದೇನೆ. ಬಳಿಕ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶರಾದ ಹಿನ್ನೆಲೆ ಸಮಿತಿ ರಚನೆ ತಡವಾಗಿದೆ. ಆದ್ರೆ ಶೀಘ್ರವೇ ಈ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುವುದು ಎಂದರು.
ಟೈಗರ್ ಗ್ಯಾಂಗ್ ಅಲ್ಲ ಬಿಲ್ಲಿ ಗ್ಯಾಂಗ್:
ಕೊಲೆ ಪ್ರಕರಣವೊಂದರಲ್ಲಿ ಇತ್ತೀಚಿಗೆ ಗೋಕಾಕಿನಲ್ಲಿ ಸೆರೆ ಸಿಕ್ಕ 9 ದುಷ್ಕರ್ಮಿಗಳು ಟೈಗರ್ ಗ್ಯಾಂಗ್ಗೆ ಸೇರಿದವರಲ್ಲ. ಅವರೆಲ್ಲ ಬಿಲ್ಲಿ ಗ್ಯಾಂಗ್ ಸದಸ್ಯರು ಎಂದು ಸಚಿವ ಜಾರಕಿಹೊಳಿ ಲೇವಡಿ ಮಾಡಿದರು. ಆ ಗ್ಯಾಂಗ್ ಅನ್ನು ನಮ್ಮ ಪೊಲೀಸರು ಈಗಾಗಲೇ ಮಟ್ಟ ಹಾಕಿದ್ದಾರೆ ಎಂದರು.
ಕೊರೊನಾ ನಿಯಂತ್ರಣ:
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಕೊರೊನಾ ಹತೋಟಿಗೆ ಬಂದಿದೆ ಎಂದು ಯಾವ ಅಧಿಕಾರಿಯೂ ಮೈಮರೆಯಬಾರದು. ಕೊವೀಡ್ ವಾರ್ಡ್ ಹಾಗೂ ಕೋವಿಡ್ ಕೇರ್ ಸೆಂಟರ್ಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಈಗ ಹೆಚ್ಚು ಟೆಸ್ಟ್ ಆಗುತ್ತಿರುವ ಕಾರಣ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಆದ್ರೆ ಜನ ಭಯಭೀತರಾಗಬಾರದು. ಅನಾವಶ್ಯಕ ಮನೆಯಿಂದ ಹೊರಬರಬಾರದು. ವೈದ್ಯರ ಸಲಹೆಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಸಚಿವರು ಮನವಿ ಮಾಡಿದರು.