ಬೆಳಗಾವಿ: ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಒಬ್ಬಂಟಿಗರಾಗಿದ್ದಾರೆ ಎಂದು ಹೇಳೋಕಾಗಲ್ಲ. ಅವರ ಜೊತೆಗೆ ಎಷ್ಟು ಜನ ಶಾಸಕರಿದ್ದಾರೆ ಎಂಬುದು ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಗೊತ್ತಾಗಲಿದೆ ಎಂದು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಸಚಿವ ಸತೀಶ್ ಜಾರಕಿಹೊಳಿಗೆ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಏಕಾಂಗಿನಾ ಅಥವಾ ಅವರೊಟ್ಟಿಗೆ ಶಾಸಕರು ಇದ್ದಾರಾ ಎಂಬುದು ಚುನಾವಣೆ ಫಲಿತಾಂಶ ಬಳಿಕ ಗೊತ್ತಾಗಲಿದೆ. ಉಪಚುನಾವಣೆ ಫಲಿತಾಂಶದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದೇವೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಲಿದೆ. ಆಗ ಪಕ್ಷೇತರರು ಸೇರಿ ಬಿಜೆಪಿ 108 ಸ್ಥಾನ ಹೊಂದಲಿದೆ. ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆ ಆಗಲಿದೆ ಎಂದು ಪುನರುಚ್ಚರಿಸಿದರು.
ಇನ್ನು ಕೆಎಂಎಫ್ ಚುನಾವಣೆಯು ಮೊದಲ ಬಾರಿಗೆ ಪಕ್ಷಾತೀತವಾಗಿ ನಡೆದಿದೆ. ಈ ಅವಧಿಗೆ ವಿವೇಕರಾವ್ ಪಾಟೀಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಡೈರಿ ಅಭಿವೃದ್ಧಿಗೆ ಎಲ್ಲರೂ ಪ್ರಯತ್ನ ಮಾಡುತ್ತೇವೆ. ಸಹಕಾರ ಇಲಾಖೆ ಚುನಾವಣೆಯಲ್ಲಿ ಪಕ್ಷ ಬರಬಾರದು. ಅಮರನಾಥ ಜಾರಕಿಹೊಳಿ ಕೆಎಂಎಫ್ ನಿರ್ದೇಶಕರಾಗಿದ್ದಾರೆ. ಅವರ ಕೆಲಸದ ಮೇಲೆ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹೊಂದಾಣಿಕೆ ಆದರೆ ಒಳ್ಳೆಯದು. ಸಿಎಂ ಹೆಚ್ಡಿಕೆಯವರಿಂದ ತಮಗೆ ಯಾವುದೇ ಆಫರ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.