ಬೆಳಗಾವಿ: ಧರ್ಮ ಮತ್ತು ಜಾತಿಗಳ ನಡುವೆ ವ್ಯಾಪಕ ಸಂಘರ್ಷ ಹುಟ್ಟು ಹಾಕುವಂತ ಕೆಲಸವನ್ನು ಕೆಲ ರಾಜಕಾರಣಿಗಳು ಮಾಡುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬೈಲಹೊಂಗಲ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯ ಧುರೀಣರು ಸರ್ವ ಜನಾಂಗದ ಶ್ರೇಯೋಭಿವೃದ್ಧಿಗೆ ಗಮನ ಹರಿಸದೇ ಶಾಂತಿ ಮತ್ತು ಸೌಹಾರ್ದತೆ ಬೆಳೆಸದೇ ಅಧಿಕಾರದ ಗದ್ದುಗೆಗಾಗಿ ಜಾತಿಯಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಜನರ ಭಾವನೆಗಳನ್ನು ಕೆರಳಿಸುವಂತ ಕೆಲಸ ಮಾಡುತ್ತಿದ್ದಾರೆ. ಇಂತಹ ಕೃತ್ಯವನ್ನು ಯಾರೂ ಮಾಡಬಾರದೆಂಬ ಸಂದೇಶವನ್ನು ನಾವು ನೀಡಲಿಕ್ಕೆ ಇಚ್ಛಿಸುತ್ತೇವೆ ಎಂದರು.
ಭಾರತೀಯ ಉತ್ಕೃಷ್ಟ ಸಂಸ್ಕೃತಿಯಲ್ಲಿ ಎಲ್ಲರೂ ಒಂದಾಗಿ ಬಾಳಬೇಕು. ಶಾಂತಿ, ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ಧರ್ಮಗಳಲ್ಲಿ ನಿಷ್ಠೆ ಹೊಂದಿರಬೇಕು. ಪರಧರ್ಮದ ಬಗ್ಗೆ ಸಹಿಷ್ಣುತಾ ಮನೋಭಾವ ಬೆಳೆಸಿಕೊಂಡು ಬಂದಾಗ ಮಾತ್ರ ಧರ್ಮ, ಜಾತಿಗಳ ನಡುವೆ ಯಾವುದೇ ಸಂಘರ್ಷ ಉಂಟಾಗುವುದಿಲ್ಲ. ಪ್ರತಿಯೊಬ್ಬರಲ್ಲಿ ಸ್ವಾಭಿಮಾನ ಇರಬೇಕು. ಸ್ವಾಭಿಮಾನದ ಕೊರತೆಯಿಂದಾಗಿ ಎಲ್ಲ ರಂಗಗಳಲ್ಲಿ ಅನೇಕ ಸಂಘರ್ಷಗಳು ಉಂಟಾಗುತ್ತಿವೆ ಎಂದು ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಚಿಕ್ಕಮಗಳೂರು: ದತ್ತಮಾಲಾ ಅಭಿಯಾನಕ್ಕೆ ಶಾಂತಿಯುತ ತೆರೆ