ಬೆಳಗಾವಿ: ಕುರುಬ ಸಮುದಾಯ ಜಿಲ್ಲೆಯಲ್ಲಿ ಎರಡನೇ ಅತಿ ದೊಡ್ಡ ಸ್ಥಾನದಲ್ಲಿದೆ. ಹೀಗಾಗಿ ಮುಂಬರುವ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಕುರುಬ ಸಮುದಾಯವರಿಗೆ ಟಿಕೆಟ್ ನೀಡಬೇಕು ಎಂದು ಕುರುಬ ಸಮುದಾಯದ ಮುಖಂಡ ರಾಜೇಂದ್ರ ಸಣ್ಣಕ್ಕಿ ಆಗ್ರಹಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕುರುಬ ಸಮುದಾಯ ಎರಡೂವರೆ ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದ್ದು, ಎಲ್ಲಾ ಪಕ್ಷಗಳಲ್ಲಿಯೂ ಕುರುಬ ಸಮಾಜದ ಮುಖಂಡರು ಗುರುತಿಸಿಕೊಂಡಿದ್ದಾರೆ. ಹೀಗಾಗಿ ಬೆಳಗಾವಿ ಲೋಕಸಭೆಯಲ್ಲಿ ಟಿಕೆಟ್ ನೀಡುವಂತೆ ಒತ್ತಾಯವಿದೆ. ಅಲ್ಲದೇ ಕುರುಬ ಸಮಾಜಕ್ಕೆ ಲೋಕಸಭೆ ಟಿಕೆಟ್ ಕೇಳುವುದರಲ್ಲಿ ತಪ್ಪೇನಿದೆ ಎಂದರು.
ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿಗಾಗಿ ಸಮಾಜದ ಎಲ್ಲಾ ಪಕ್ಷದ ರಾಜಕೀಯ ನಾಯಕರ ನೇತೃತ್ವದಲ್ಲಿ ಮೊದಲ ಬಾರಿಗೆ ಒಕ್ಕೊರಲಿನಿಂದ ಆಗ್ರಹಿಸಲಾಗುತ್ತಿದೆ. ಕುರುಬ ಸಮುದಾಯಕ್ಕೆ ಸ್ವಾತಂತ್ರ್ಯ ಪೂರ್ವದಿಂದಲೂ ಎಸ್ಟಿ ಮೀಸಲಾತಿ ಬೇಡಿಕೆ ಇತ್ತು. ಈಗಾಗಲೇ ಬಿದರ್, ಯಾದಗಿರಿ ಮತ್ತು ಕೊಡಗಿನಲ್ಲಿ ಎಸ್ಟಿ ಮೀಸಲಾತಿ ಸಿಗುತ್ತಿದೆ. ಅಲ್ಲಿ ಏನು ನಮಗೆ ಸಮಸ್ಯೆ ಇಲ್ಲ. ಆದ್ರೆ, ನಮ್ಮ ಬೇಡಿಕೆ ಇರೋದು ಇಡೀ ಕರ್ನಾಟಕಕ್ಕೆ ವಿಸ್ತರಣೆ ಮಾಡಬೇಕು. ನಮಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ವಿಶ್ವಾಸವಿದೆ ಎಂದು ಹೇಳಿದರು.
ಕುರುಬ ಸಮುದಾಯದ ಮೀಸಲಾತಿಯನ್ನು ಸಮ್ನೇ ಕೇಳುತ್ತಿಲ್ಲ. ಈಗಾಗಲೇ ಕುರುಬರ ಕುರಿತಾಗಿ ಕುಲಶಾಸ್ತ್ರ ಅಧ್ಯಯನ ಮಾಡಲಾಗಿದೆ. ಕುರುಬ ಸಮುದಾಯ ಸಾಕಷ್ಟು ಹಿಂದುಳಿದಿದ್ದು, ಈಗಲೂ ರಾಜ್ಯದಲ್ಲಿರುವ ಕುರುಬರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕುರಿಗಳನ್ನು ಕಾಯುತ್ತಾ ಜೀವನ ನಡೆಸುತ್ತಿದ್ದಾರೆ. ಇದರಿಂದ ಕುರುಬ ಸಮುದಾಯದ ಜನರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಇದಲ್ಲದೇ ಗುಡ್ಡಗಾಡು ಪ್ರದೇಶದಲ್ಲಿ ಕುರಿ ಕಾಯುವ ಕುರುಬರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಕಟ್ಟಕಡೆಯ ಕುರುಬ ಜನಾಂಗಕ್ಕೂ ಎಸ್ಟಿ ಮೀಸಲಾತಿ ಸಿಗಬೇಕು ಎಂದು ಒತ್ತಾಯಿಸಲಾಗುತ್ತಿದೆ ಎಂದರು.